ಸಿರಿವಂತರಾಗಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ವರ್ತಮಾನದಲ್ಲಿ ಬರುವ ಹಬ್ಬಗಳ ಹಿರಿಯ ಹಬ್ಬವೇ ದೀಪಾವಳಿ. ನೀವು ಧನವಂತರಾಗಬೇಕೆಂದರೆ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಜನರು ತಾವು ಕೆಲಸ ಮಾಡುವ ಅಂಗಡಿ, ಫ್ಯಾಕ್ಟರಿ, ಹೋಟೆಲುಗಳಲ್ಲಿ ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ಇದರಿಂದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಹಾಗೂ ಲಕ್ಷ್ಮಿ ಎಂದಿಗೂ ಜೊತೆಯಲ್ಲಿರುತ್ತಾಳೆ ಎಂಬ ನಂಬಿಕೆ ಇದೆ.
ದೀಪಾವಳಿ ಅಶ್ವಯಜ ಮಾಸದ ಕೃಷ್ಣ ಪಕ್ಷದಲ್ಲಿ ಆರಂಭವಾಗಿ ಕಾರ್ತಿಕ ಮಾಸದ ಪಾಡ್ಯದಲ್ಲಿ ಕೊನೆಗೊಳ್ಳುತ್ತದೆ. ದೀಪಾವಳಿಯನ್ನು ಒಟ್ಟು 3 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲನೆಯ ದಿನ ನರಕ ಚತುರ್ದಶಿ, ಎರಡನೇ ದಿನ ಅಮವಾಸ್ಯೆ ಧನಲಕ್ಷ್ಮೀ ಪೂಜೆ ಮತ್ತು ಮೂರನೇಯ ದಿನ ಬಲಿಪಾಡ್ಯಮಿ ಬಲಿಯೇಂದ್ರನನ್ನು ಆರಾಧನೆ ಮಾಡುವ ಮೂಲಕ ದೀಪಾವಳಿ ಮುಗಿಯುತ್ತದೆ.
Advertisement
Advertisement
ದೀಪಾವಳಿ ಹಬ್ಬಗಳ ಸರಮಾಲೆಯಾಗಿರುವುದರಿಂದ ದೊಡ್ಡ ಹಬ್ಬವೆಂದೇ ಕರೆಯಲಾಗುತ್ತದೆ. ಈ 3 ದಿನಗಳಲ್ಲಿ ನಡುವಿನ ದಿನ ಧನಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ವ್ಯಾಪಾರದಲ್ಲಿ ಲಾಭಗಳಿಸುವ ಸಲುವಾಗಿ ದೀಪಾವಳಿಯ ಸಂದರ್ಭದಲ್ಲಿ ಬರುವ ಅಮಾವಾಸ್ಯೆಯ ದಿನ ಧನಲಕ್ಷ್ಮಿ ಪೂಜೆ ಮಾಡಲಾಗುತ್ತದೆ.
Advertisement
ಹಲವರು ಮನೆಯಲ್ಲಿ ಧನಲಕ್ಷ್ಮಿ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ನಾವೆಲ್ಲರು ಸಂಕಲ್ಪ ಮಾಡುವಾಗ ‘ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣಾರ್ಥ’ ಎಂದು ಹೇಳುತ್ತೇವೆ. ಅಂದರೆ ಮನೆಯಲ್ಲಿ ಇರುವಂತಹ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆ ಆಗಲಿ ಎಂಬರ್ಥ. ಹೀಗಾಗಿ ಧನಲಕ್ಷ್ಮಿ ಪೂಜೆಯನ್ನು ತುಂಬಾ ವ್ಯವಸ್ಥಿತವಾಗಿ ಮಾಡಬೇಕು.
Advertisement
ಮೇವಿಗೆ ತೆರಳಿದ ಗೋವುಗಳು ಸಂಜೆ ಮನೆಗೆ ಹಿಂತಿರುಗಿ ಬರುವ ಸಮಯ ಗೋಧೂಳಿ ಲಗ್ನ ಎಂದು ಕರೆಯಲಾಗುತ್ತದೆ. ಈ ವೇಳೆ ವ್ಯಾಪಾರ ಮಾಡುವ ಸ್ಥಳದಲ್ಲಿ ಗೋಮಯ ಸಾರಿಸಿ, ರಂಗೋಲಿ ಹಾಕಿ, ಅಲಂಕರಿಸಿ, ಲಕ್ಷ್ಮಿ, ಗಣಪತಿ, ಸರಸ್ವತಿಯ ಫೋಟೋವನ್ನಿಟ್ಟು, ಕಲಶವನ್ನು ಸ್ಥಾಪಿಸಿ, ನಾಣ್ಯಗಳನ್ನಿಟ್ಟು, ತುಪ್ಪದ ದೀಪ ಹಚ್ಚಿ ಪೂಜೆ ಮಾಡಬೇಕು.
ಉತ್ತರ ಭಾರತದಲ್ಲಿ ಈ ದಿನವನ್ನು ಹೊಸ ವರ್ಷ ಅಥವಾ ಹೊಸ ಆರ್ಥಿಕ ವರ್ಷದ ಆರಂಭ ಎಂತಲೂ ಕರೆಯುತ್ತಾರೆ. ಕಳೆದ ದೀಪಾವಳಿಯಿಂದ ಹಿಡಿದು ಈ ದೀಪಾವಳಿ ವರೆಗಿನ ವ್ಯಾಪಾರದ ಲೆಕ್ಕಾಚಾರವನ್ನು ಕೊನೆಗೊಳಿಸಿ, ಹೊಸ ಲೆಕ್ಕಪತ್ರವನ್ನು ಇಟ್ಟು ವ್ಯಾಪಾರವನ್ನು ಪುನರಾರಂಭಿಸುತ್ತಾರೆ. ಮಾತ್ರವಲ್ಲದೇ ಇಡೀ ವರ್ಷ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪ್ರಾಪ್ತಿಯಾಗಲಿ ಎಂದು ಧನಲಕ್ಷ್ಮಿಯನ್ನು ಆರಾಧಿಸುತ್ತಾರೆ.