KarnatakaLatestMain Post

ರಾಜಕಾರಣಿಗಳಿಗೆ ದಿವ್ಯಾ ಜಾಲ – ಘಟಾನುಘಟಿಗಳೊಂದಿಗಿನ ಫೋಟೋಸ್ ವೈರಲ್

ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಆರೋಪಿಯಾಗಿರುವ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದರೂ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಆದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ಪರ ವಿರುದ್ಧ ಕೂಗು ವ್ಯಕ್ತವಾಗುತ್ತಿದೆ.

ದಿವ್ಯಾ ಕಾಂಗ್ರೆಸ್ ನಾಯಕರ ಜೊತೆ ಇರುವ ಫೋಟೋ ಪೋಸ್ಟ್ ಮಾಡಿ ಬಿಜೆಪಿಯವರು ವ್ಯಂಗ್ಯ ಮಾಡುತ್ತಿದ್ದರೆ, ಬಿಜೆಪಿ ನಾಯಕರ ಜೊತೆ ದಿವ್ಯಾ ಇರುವ ಫೋಟೋ ಪೋಸ್ಟ್ ಮಾಡಿ ಕಾಂಗ್ರೆಸ್‌ನವರು ವ್ಯಂಗ್ಯ ಮಾಡುತ್ತಿದ್ದಾರೆ. ಈ ನಡುವೆ ದಿವ್ಯಾ ಪತ್ತೆ ಮಾಡಲು ಇನ್ನೂ ಸಿಐಡಿ ತಂಡಕ್ಕೆ ಸಾಧ್ಯವಾಗದಿರುವ ಬಗ್ಗೆಯೂ ಬೇರೆ ಬೇರೆ ರೀತಿ ಚರ್ಚೆಯಾಗುತ್ತಿದೆ.

ದಿನಕ್ಕೊಂದು ಫೋಟೋ ರಿಲೀಸ್ ಮಾಡುತ್ತಿರುವ ಎರಡು ಪಕ್ಷಗಳ ಕಾರ್ಯಕರ್ತರು, ದಿವ್ಯಾ ನಾಪತ್ತೆ ವಿಚಾರವನ್ನು ಕೆದಕುತ್ತಿದ್ದಾರೆ. ಬುಧವಾರ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಜೊತೆ ಆರೋಪಿ ದಿವ್ಯಾ ಹಾಗರಗಿ ಇರುವ ಫೋಟೋ ವೈರಲ್ ಆಗಿದೆ. ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ವಾಟ್ಸಪ್, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಲಾಗುತ್ತಿದೆ. ಇದನ್ನೂ ಓದಿ: ಪ್ರೊಫೆಸರ್ ನಾಗರಾಜ್ ಮನೆಗೆ ಆಗಾಗ್ಗೆ ಹೋಗ್ತಿದ್ದೆ – ಪ್ರಶ್ನೆ ಪತ್ರಿಕೆ ಲೀಕ್ ಒಪ್ಕೊಂಡ ಸೌಮ್ಯಾ

ಕಾಂಗ್ರೆಸ್ ನಾಯಕರ ಜೊತೆ ಇರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಇರುವ ಫೋಟೋಗಳು ಕೂಡ ಹೊರಗೆ ಬಂದಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ವಿ ಸೋಮಣ್ಣ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಇರುವ ಫೋಟೋಗಳು ಕೂಡ ವೈರಲ್ ಆಗಿವೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

ಇದೆಲ್ಲದರ ನಡುವೆ ದಿವ್ಯಾ ಕಾಶ್ಮೀರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸಿಐಡಿಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಮಹಾರಾಷ್ಟ್ರದಿಂದ ಬೇರೆ ಬೇರೆ ರಾಜ್ಯಗಳಿಗೆ ಓಡಿಹೋಗಿದ್ದ ದಿವ್ಯಾ ಹಾಗೂ ಗ್ಯಾಂಗ್ ಈಗ ಕಾಶ್ಮೀರಕ್ಕೆ ಲಗ್ಗೆ ಇಟ್ಟಿದ್ದಾರೆ ಎನ್ನಲಾಗಿದ್ದು, ಸಿಐಡಿ ಟೀಮ್ ಕೂಡ ಅಲ್ಲಿಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಿನ್ನೆಲೆಯಲ್ಲಿ ಕಲಬುರಗಿ ಕೋರ್ಟ್ಗೆ ಸಿಐಡಿ ತಂಡ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದೆ.

Leave a Reply

Your email address will not be published.

Back to top button