ದಾಂಪತ್ಯಕ್ಕೂ ತಟ್ಟಿದ ಕೊರೊನಾ ಬಿಸಿ – ಮನೆಯಲ್ಲೇ ಇರುವ ಪತಿ, ಪತ್ನಿ ಕಿತ್ತಾಟಕ್ಕೆ ಹೆಚ್ಚಾಗ್ತಿದೆ ವಿಚ್ಛೇದನ

Public TV
1 Min Read
divorce rings 3

ಬೀಜಿಂಗ್: ಇಷ್ಟು ದಿನ ಮಹಾಮಾರಿ ಕೊರೊನಾ ಕಾಟಕ್ಕೆ ಸಾವಿರಾರು ಜೀವಗಳು ಬಲಿಯಾಗಿದೆ. ಆದರೆ ಈಗ ಚೀನಾದಲ್ಲಿ ಕೊರೊನಾ ವೈರಸ್ ದಾಂಪತ್ಯ ಜೀವನಕ್ಕೂ ಮಾರಕವಾಗಿದ್ದು, ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮನೆಯಲ್ಲೇ ಇರುತ್ತಿದ್ದ ಪತಿ, ಪತ್ನಿಯರ ಕಿತ್ತಾಟ ಹೆಚ್ಚಾಗಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗೆ ಚೀನಾ ಸರ್ಕಾರ, ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಈ ಹಿಂದೆ ಆದೇಶ ಹೊರಡಿಸಿತ್ತು. ಈ ಪ್ರಕಾರ ಜನರು ಮನೆಗಳಿಂದ ಹಲವು ದಿನಗಳ ಕಾಲ ಹೊರಬರುತ್ತಿಲ್ಲ. ಆದರೆ ಸರ್ಕಾರ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಮನೆಯಲ್ಲಿರಿ ಎಂದಿದ್ದೇ ಈಗ ಚೀನಾದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.

corona 5

ಒಂದೆಡೆ ಮನೆಯಲ್ಲಿಯೇ ಇದ್ದು ಇದ್ದು ಹಲವರು ಬೇಸತ್ತು ಹೋಗಿದ್ದರೆ, ಇನ್ನೊಂದೆಡೆ ಅಷ್ಟಕ್ಕಷ್ಟೇ ಸಂಬಂಧ ಹೊಂದಿದ್ದ ಪತಿ-ಪತ್ನಿಯರ ನಡುವೆ ಜಗಳ, ಕಿತ್ತಾಟ ಹೆಚ್ಚಾಗಿದೆ. ಮನೆಯೊಳಗಿನ ಈ ಜಗಳ ಈಗ ಕೋರ್ಟ್ ಮೆಟ್ಟಿಲು ಏರುತ್ತಿದ್ದು, ವಿಚ್ಛೇದನದ ಘಟ್ಟವನ್ನು ತಲುಪುತ್ತಿದೆ. ಇದರಿಂದ ದೇಶದಲ್ಲಿ ವಿಚ್ಛೇದನಗಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರದ ವಿವಾಹ ನೋಂದಣಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

final divorce decree

ಈ ಮೊದಲಿಗಿಂತ ಕೊರೊನಾ ವೈರಸ್ ಸೋಂಕು ಬಂದ ಮೇಲೆಯೇ ಹೆಚ್ಚಿನ ವಿಚ್ಛೇದನಗಳು ಆಗುತ್ತಿವೆ ಎಂದು ಸಿಚುವಾನ್ ಪ್ರಾಂತ್ಯದ ಡಾಝೌ ಮದುವೆ ನೋಂದಣಾಧಿಕಾರಿ ಲು ಶಿಜುನ್ ತಿಳಿಸಿದ್ದಾರೆ.

ಚೀನಾದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 80,928 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 70,420 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,245 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 7,263 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

marriage divorce

ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *