ಹಾಸನ: ಜಿಲ್ಲಾ ಕೇಂದ್ರ ಹಾಸನವನ್ನು ಕಳೆದುಕೊಂಡಿದ್ದೇವೆ. ಅದನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕು ಅಷ್ಟೇ ನಮ್ಮ ಗುರಿ ಎಂದು ಎಂಎಲ್‍ಸಿ ಸೂರಜ್ ರೇವಣ್ಣ ಹೇಳಿದ್ದಾರೆ.
ಹಾಸನ ತಾಲೂಕನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಯಾವುದಾದರೂ ಒಂದು ತಾಲೂಕನ್ನು ನೋಡೆಲ್ ತಾಲೂಕಾಗಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೊಳೆನರಸೀಪುರವನ್ನು ನಮ್ಮ ತಂದೆ, ತಾಯಿ ನೋಡಿಕೊಳ್ಳುತ್ತಿದ್ದಾರೆ. ಹಾಸನದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬುದು ಪಕ್ಷದ ಹಿರಿಯರು, ಮುಖಂಡರು, ಯುವಕರ ಅಪೇಕ್ಷೆಯಾಗಿತ್ತು. ಅದಕ್ಕಾಗಿ ಹಾಸನ ತಾಲೂಕನ್ನು ನೋಡೆಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ನೀವು ಹಿಜಬ್ ಬೇಡ ಅಂದ್ರೆ, ನಾವು ಕುಂಕುಮ ಬೇಡ, ಹೂ ಬೇಡ ಎಂದರೆ ಪರಿಸ್ಥಿತಿ ಏನಾಗುತ್ತೆ?: ತನ್ವೀರ್ ಸೇಠ್
ಹಾಸನದಲ್ಲಿ ರೇವಣ್ಣ ಅಥವಾ ಭವಾನಿ ರೇವಣ್ಣ ಬಂದು ಸ್ಪರ್ಧಿಸಲಿ ಎಂಬ ಶಾಸಕ ಪ್ರೀತಂಗೌಡ ಪಂಥಾಹ್ವಾನ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ತಾಯಿಯನ್ನು ಕೆ.ಆರ್.ಪೇಟೆ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲೂ ಅಭ್ಯರ್ಥಿ ಆಗ್ತಾರೆ ಅಂಥಾ ಹೇಳಿದ್ರು. ಈಗ ಹಾಸನದಲ್ಲಿ ಸ್ಪರ್ಧಿಸ್ತಾರೆ ಅಂಥಾ ಹೇಳುತ್ತಿದ್ದಾರೆ. ಇನ್ನೂ ಎಲ್ಲೆಲ್ಲಿ ಊಹಾಪೋಹ ಹಬ್ಬಿಸುತ್ತಾರೋ ಹಬ್ಬಿಸಲಿ ನನಗೇನು ಬೇಜಾರಿಲ್ಲ. ನಮ್ಮ ಕುಟುಂಬದವರು ಯಾರಾದ್ರು ಬರಲಿ ಎನ್ನುವ ಅಪೇಕ್ಷೆ ಅವರಿಗಿದೆ. ಆದರೆ ನಮ್ಮ ಅಪೇಕ್ಷೆಯನ್ನು ಇನ್ನೂ ತಿಳಿಸಿಲ್ಲ. ದೇವೇಗೌಡರು, ನಮ್ಮ ಪಕ್ಷದ ಆರು ಶಾಸಕರು, ರೇವಣ್ಣ, ಹಿರಿಯ ರಾಜಕಾರಣಿಗಳು ಇದ್ದಾರೆ. ಅವರೆಲ್ಲಾ ಸೇರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದರು. ಇದನ್ನೂ ಓದಿ: ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ
ಇದೇವೇಳೆ ಹಿಜಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದರ ಬಗ್ಗೆ ನನ್ನದೇ ಆದ ರೀತಿಯಲ್ಲಿ ಮಾತನಾಡಬೇಕು ಅಂದುಕೊಂಡಿದ್ದೇನೆ, ಅದನ್ನು ಬಹಿರಂಗಪಡಿಸಲ್ಲ ಎಂದು ನುಡಿದರು.