ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ಕುಗ್ರಾಮ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಭೇಟಿ ನೀಡಲಿದ್ದು, ಒಂದು ದಿನ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಾರ್ತಾ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮದಲ್ಲಿ ಹಿಂದುಳಿದ ಪ್ರದೇಶದ ಜನರಿಗೆ ಸರ್ಕಾರ ನಿಮ್ಮೊಂದಿಗೆ ಎಂಬ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನವರಿ ನಾಲ್ಕರಂದು ಗ್ರಾಮಕ್ಕೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
Advertisement
Advertisement
ಕುಮಟಾ ಪಟ್ಟಣದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸೊಪ್ಪಿನ ಹೊಸಳ್ಳಿ ಗ್ರಾಮ ಮೇದಿನಿ ಗ್ರಾಮವೂ ರಸ್ತೆ, ವಿದ್ಯುತ್, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆ ಹುಲಿದೇವರಕೊಡ್ಲು ಕ್ರಾಸ್ ನಿಂದ 8 ಕಿ.ಮೀ ದೂರದಲ್ಲಿದ್ದು ಘಟ್ಟ ಪ್ರದೇಶದ ಕಡಿದಾದ ಹಾದಿಯಲ್ಲಿ ಸಾಗಬೇಕಾಗಿದೆ.
Advertisement
ಪ್ರಸ್ತುತ ಮೇದಿನಿ ಬಗ್ಗೆ ತಿಳಿದ ಮತ್ತು ಇತ್ತೀಚೆಗೆ ಸರ್ಕಾರದ ಸೂಚನೆಯಂತೆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಇದೀಗ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಮೇದಿನಿ ಕುಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ವಾಸ್ತವ್ಯಕ್ಕಾಗಿ ಈಗಾಗಲೇ ಶಾಲಾ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಲಿದ್ದಾರೆ.
Advertisement
ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಕುಮಟಾ ಸಹಾಯಕ ಕಮೀಷನರ್ ಅಜಿತ್ ಸೇರಿದಂತೆ ಇತರೆ ಅಧಿಕಾರಿಗಳು ತೆರಳಲಿದ್ದು, ಆರೋಗ್ಯ ಶಿಬಿರ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ತಿಂಗಳ ಎರಡನೇ ಬುಧವಾರ ಮತ್ತು ನಾಲ್ಕನೇ ಬುಧವಾರ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ನೇರ ಫೋನ್ ಇನ್ ವಾರ್ತಾ ಸ್ಪಂದನ, ಪತ್ರಕರ್ತರೊಂದಿಗೆ ಸಂವಾದ ಹಾಗೂ ತಿಂಗಳಿಗೊಮ್ಮೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಮಸ್ಯೆಗಳಿಗೆ ಸ್ಪಂದಿಸುವ ವಾರ್ತಾ ಮುಸ್ಸಂಜೆ ಕಾರ್ಯಕ್ರಮಗಳನ್ನು ವಾರ್ತಾ ಇಲಾಖೆ ಹಮ್ಮಿಕೊಂಡಿದೆ.
ಜಿಲ್ಲೆಯೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸ್ವಚ್ಛತೆ ಹಾಗೂ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಯತ್ ಸಿಇಓ ಎಂ. ರೋಷನ್ ಅವರು ಮಾತನಾಡಿ, ಇನ್ನು ಒಂದು ವರ್ಷದಲ್ಲಿ ಪ್ಲಾಸ್ಟಿಕ್ ರಹಿತ ಜಿಲ್ಲೆಯನ್ನಾಗಿ ಮಾಡುವ ಇಚ್ಚೆ ಇದೆ. ಇದರ ಜೊತೆಗೆ ಜಿಲ್ಲೆಯ ಸಂಪ್ರದಾಯಿಕ ಪದಾರ್ಥಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತದಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗುವುದು. ಇದರ ಮೂಲಕ ಸ್ಥಳೀಯ ಸಂಪ್ರದಾಯಿಕ ಪದಾರ್ಥಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.