Chikkaballapur
ನಂದಿಬೆಟ್ಟದಲ್ಲಿ ನಂದಿ ಸಂತೆ – ವೀಕೆಂಡಲ್ಲಿ ಇನ್ಮುಂದೆ ಸಿಗುತ್ತೆ ರುಚಿಕರ ಊಟ!

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಷ್ಟು ದಿನ ಊಟ ಸಿಗದೆ ಪರದಾಡುತ್ತಿದ್ದ ಪ್ರವಾಸಿಗರು, ಇನ್ನೂ ಹೊಟ್ಟೆ ತುಂಬಾ ಊಟ ಮಾಡಿ ಜೊತೆಗೆ ಮನೆಗೆ ಹಪ್ಪಳ, ಸಂಡಿಗೆ, ಮಸಾಲೆ ಪದಾರ್ಥಗಳು ಸೇರಿದಂತೆ ಬಗೆ ಬಗೆಯ ರಾಗಿಯ ತಿಂಡಿ-ತಿನಿಸುಗಳು, ಹಣ್ಣು-ತರಕಾರಿಗಳನ್ನ ಸಹ ಕೊಂಡೊಯ್ಯಬಹುದಾಗಿದೆ.
ಹೌದು, ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಹಾಗೂ ಜಿಲ್ಲೆಯಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ ಜಿಲ್ಲೆಯ ಸಂಸ್ಕೃತಿ, ಕಲೆ, ವಿಶಿಷ್ಟತೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಡಳಿತ ನಂದಿ ಸಂತೆ ಆರಂಭಿಸಲು ಮುಂದಾಗಿದೆ.
ಏನಿದು ನಂದಿ ಸಂತೆ..?
ಪ್ರತಿ ಶನಿವಾರ ಹಾಗೂ ಭಾನುವಾರದಂದು ನಂದಿಗಿರಿಧಾಮಕ್ಕೆ 8 ರಿಂದ 10 ಸಾವಿರ ಮಂದಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಬೆಟ್ಟದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಉತ್ತಮ ಊಟ ಸಿಗುವಂತೆ ಮಾಡಲು ಸವಿರುಚಿ ಕ್ಯಾಂಟೀನ್ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ. ಜೊತೆಗೆ ವಿವಿಧ ಸ್ವಸಹಾಯ-ಮಹಿಳಾ ಸಂಘಗಳಿಂದ ಉತ್ಪಾದಿಸಲಾಗಿರುವ ಮಸಾಲೆ ಪದಾರ್ಥಗಳು, ರಾಗಿಯ ತಿಂಡಿ ತಿನಿಸುಗಳು, ಚರ್ಮ ಕಲಾಂಕರಿ ಕಲೆಯ ವಸ್ತುಗಳು, ಸ್ಥಳೀಯರೇ ಉತ್ಪಾದಿಸಿರುವ ಜವಳಿ ಹಾಗೂ ಖಾದಿ ಬಟ್ಟೆಗಳು, ಸೇರಿದಂತೆ ಸಿರಿಧಾನ್ಯ, ಸಾವಯವ ಹಣ್ಣು-ತರಕಾರಿಗಳು, ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಸಸಿಗಳು, ಬಿತ್ತನೆ ಬೀಜಗಳು ಸೇರಿದಂತೆ ತರಹೇವಾರಿ ಪದಾರ್ಥಗಳ ಮಳಿಗೆಗಳನ್ನ ತೆರೆಯಲು ಜಿಲ್ಲಾಡಳಿತ ಉದ್ದೇಶಿಸಿದೆ. ಜೊತೆಗೆ ಜಿಲ್ಲೆಯಲ್ಲಿನ ವಿವಿಧ ಕಲಾತಂಡಗಳು ಪ್ರವಾಸಿಗರ ಮುಂದೆ ತಮ್ಮ ಪ್ರತಿಭೆಗಳನ್ನ ಸಹ ಅನಾವರಣ ಮಾಡಲು ವೇದಿಕೆ ಅಣಿಗೊಳಿಸಲಾಗುತ್ತಿದೆ.
ನಂದಿ ಸಂತೆ ಯಾಕೆ?
ಬೆಂಗಳೂರಿನ ಟ್ರಾಫಿಕ್ ಕಿರಿ ಕಿರಿ ಜಂಜಾಟದ ಬದುಕಿನಲ್ಲಿ ವಾರಾಂತ್ಯದಲ್ಲಿ ಕಾಲ ಕಳೆಯಲು ಬೆಂಗಳೂರಿಗರ ಹಾಟ್ ಫೇವರಿಟ್ ಸ್ಟಾಟ್ ವಿಶ್ವವಿಖ್ಯಾತ ನಂದಿಗಿರಿಧಾಮ. ಹೀಗಾಗಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ವಾರಾಂತ್ಯದಲ್ಲಿ ಲಗ್ಗೆಯಿಡುತ್ತಾರೆ. ಆದರೆ ಇಷ್ಟು ದಿನ ನಂದಿಗಿರಿಧಾಮ ಸುತ್ತಾಡಲು ಬರುತ್ತಿದ್ದ ಮಂದಿಗೆ ಊಟ ಮಾಡಲು ಸರಿಯಾದ ಹೋಟೆಲ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು.
ಈಗಾಗಲೇ ನಂದಿಗಿರಿಧಾಮದಲ್ಲಿ ಹೋಟೆಲ್ ವ್ಯವಸ್ಥೆ ಇದ್ದರೂ ದುಬಾರಿ ದುಡ್ಡು ಕೊಟ್ಟು ಕಳಪೆ ಗುಣಮಟ್ಟದ ಊಟ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಪ್ರವಾಸಿಗರು ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ವಾರಾಂತ್ಯದಲ್ಲಿ ನಂದಿ ಸಂತೆ ಆಯೋಜನೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಜಿಲ್ಲೆಯ ಹಲವೆಡೆ ಉತ್ಪಾದಿಸುವ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಜಿಲ್ಲೆಯ ಕಲೆ, ಪ್ರತಿಭೆ, ಸಂಸ್ಕೃತಿ ಪರಿಚಯಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಇದರಂತೆ ಮುಂದಿನ ವಾರಾಂತ್ಯದಿಂದ ನಂದಿಗಿರಿಧಾಮದಲ್ಲಿ ನಂದಿಸಂತೆ ಆರಂಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Nagamani Mv
August 30, 2018 at 8:47 pm
Nice idea Sir