ಗದಗ: ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈಗ ಗ್ರಾಮವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾಪವಿಲ್ಲ. ನಡೆಯುತ್ತಿರುವ ಉತ್ಖನನದ ವೇಳೆ ಮಹತ್ವದ ಅವಶೇಷ ಸಿಕ್ಕರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅವರು ತಿಳಿಸಿದ್ದಾರೆ. ಈ ಮೂಲಕ ಗ್ರಾಮವನ್ನು ಸ್ಥಳಾಂತರಿಸುವ ಮುನ್ಸೂಚನೆ ನೀಡಿದ್ದಾರೆ.
ಜಿಲ್ಲೆಯ (Gadag) ಲಕ್ಕುಂಡಿಯಲ್ಲಿ (Lakkundi) ಉತ್ಖನನ ಕಾರ್ಯ ನಡೆಯುತ್ತಿರುವ ಭಾಗಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ವೀಡಿಯೊ, ಫೋಟೋಗ್ರಫಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಈ ಆದೇಶ ಹೊರಡಿಸಿದ್ದಾರೆ. ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಉತ್ಖನನ ಜಾಗವನ್ನ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಉತ್ಖನನ ಕೆಲಸಕ್ಕೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಶುರು – ಇವತ್ತಿನ ಶೋಧದಲ್ಲೂ ಸಿಗುತ್ತಾ ಚಿನ್ನ, ವಜ್ರ..?

ಇಂದು ಸಹ (ಜ.17) ಉತ್ಖನನ ಕಾರ್ಯ ಮುಂದುವರೆಲಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಉತ್ಖನನ ನಡೆಯುತ್ತಿದೆ. ಈ ದೇವಾಲಯದ 10 ಮೀಟರ್ ಸುತ್ತಳತೆ ಜಾಗದಲ್ಲಿ ಉತ್ಖನನ ನಡೆಯುತ್ತಿದೆ. ಮೊದಲ ದಿನ ಒಂದು ಅಡಿಯಷ್ಟು ಅಗೆದು ಉತ್ಖನನ ನಡೆಸಲಾಗಿತ್ತು. 2ನೇ ದಿನದ ಉತ್ಖನನ ಕಾರ್ಯ ಆರಂಭಗೊಂಡಿದೆ. ಹಂತ ಹಂತವಾಗಿ ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ನಡೆಸುತ್ತಿದೆ.
ಈ ಉತ್ಖನನ ಕಾರ್ಯ ಚಾಲನೆ ಸಿಗುವ ಮುನ್ನ ಪುರಾತತ್ವ ಇಲಾಖೆ ಅಧಿಕಾರಿಗಳು, 10 ಮೀಟರ್ ಉದ್ದ, ಹತ್ತು ಮೀಟರ್ ಅಗಲ ಜಾಗವನ್ನ ಮಾರ್ಕ್ ಮಾಡಿದ್ರು. ಅದರೊಳಗೆ ಇಂದಿನ ಉತ್ಖನನ ಕಾರ್ಯ ನಡೆಯಲಿದೆ. ಈಗಾಗಲೇ ಪ್ರಾಧಿಕಾರಿದ ಅಧಿಕಾರಿಗಳು ಉತ್ಖನನಕ್ಕೆ ಅವಶ್ಯವಿರೋ 5,338 ಚದರ ಮೀಟರ್ ಜಾಗವನ್ನ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇಂದಿನಿಂದ ಸುಮಾರು 3-4 ತಿಂಗಳ ಕಾಲ ಉತ್ಖನನ ಕಾರ್ಯ ನಡೆಯಲಿದೆ. ಇಲ್ಲಿ ಐತಿಹಾಸಿಕ ಪ್ರಾಚೀನ ವಸ್ತುಗಳ ಜೊತೆಗೆ ಏನೆಲ್ಲಾ ಅವಶೇಷಗಳು ಸಿಗಬಹುದು ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಲಕ್ಕುಂಡಿಯಲ್ಲಿ 2003 ರಲ್ಲೂ ಉತ್ಖನನ ಕಾರ್ಯ ನಡೆದಿತ್ತು. ಇದೀಗ 22 ವರ್ಷಗಳ ನಂತರ ಮತ್ತೆ ಉತ್ಖನನ ಕಾರ್ಯ ಆರಂಭವಾಗಿದೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಇದೀಗ ಉತ್ಖನನ ಸಾಕಷ್ಟು ಕುತುಹೂಲ ಕೆರಳಿಸದ್ದು, ಉತ್ಖನನದಲ್ಲಿ ವಜ್ರ ವೈಢೂರ್ಯಗಳು, ಬಂಗಾರ ಸಿಗಬಹುದು ಎನ್ನಲಾಗಿದೆ. ಇದನ್ನೂ ಓದಿ: ನಿಧಿ ಪತ್ತೆ ಪ್ರಕರಣ – ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಮುಂದಾದ ಸರ್ಕಾರ

