ಚಿಕ್ಕೋಡಿ: ಕೃಷ್ಣಾ ನದಿಗೆ 1.27 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬಿಡಲಾಗುತ್ತಿದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮವಾಗಿ ಕೃಷ್ಣಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ಹಿಪ್ಪರಗಿ ಜಲಾಶಯದ ಒಳ ಹರಿವಿನ ಪ್ರಮಾಣ 1.28 ಲಕ್ಷ ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ಹೀಗಾಗಿ ಜಲಾಶಯದಿಂದ ಕೃಷ್ಣಾ ನದಿಗೆ 1.27 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದ ಹೊರ ವಲಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸತತವಾಗಿ ಎರಡನೇ ಬಾರಿ ಮುಳುಗಡೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಮೀರಜ್ ನಗರಕ್ಕೆ ಸಂಪರ್ಕ ಕಳೆದುಕೊಂಡಿದೆ. ಅಲ್ಲದೇ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಸಹ ಮುಳುಗಡೆಯಾಗಿವೆ. ಕೃಷ್ಣಾ ನದಿ ದಡದಲ್ಲಿರುವ ಕಲ್ಲೋಳ ಗ್ರಾಮದ ದತ್ತ ಮಂದಿರವು ಸಹ ಜಲಾವೃತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv