ಸರ್ಕಾರಿ ಶಾಲೆಯಲ್ಲಿ ಶೂ ಬದಲು ಚಪ್ಪಲಿ ಭಾಗ್ಯ – ದ್ವಂದ್ವ ನಿಲುವಿನ ಆದೇಶದಿಂದ ಹಠ ಹಿಡಿದ ಮಕ್ಕಳು

Public TV
2 Min Read
gadag

ಗದಗ: ಸರ್ಕಾರದ ಯೋಜನೆಗಳು ನಾನಾ ಸ್ವರೂಪ ಪಡೆದುಕೊಳ್ಳುತ್ತಿವೆ. ಮಕ್ಕಳಿಗೆ ಶೂ (Shoe) ಬದಲು ಚಪ್ಪಲಿ (Slippers) ನೀಡಲಾಗಿದೆ. ಸರ್ಕಾರದ ದ್ವಂದ್ವ ನಿಲುವಿನ ಆದೇಶದಿಂದ ಮಕ್ಕಳು ಹಾಗೂ ಪಾಲಕರಿಗೆ ಬೇಸರ ಮೂಡಿಸಿದ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

ಗದಗ ಜಿಲ್ಲೆಯಲ್ಲಿ 612 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಆ ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗಾಗಿ 2,36,67,930 ರೂ. ನೀಡಲಾಗಿದೆ. ಇನ್ನು 113 ಸರ್ಕಾರಿ ಪ್ರೌಢಶಾಲೆಗಳಿದ್ದು, 5,28,430 ರೂ. ನೀಡಲಾಗಿದೆ. ಆದರೆ ಲಕ್ಷ್ಮೇಶ್ವರ ಪಟ್ಟಣದ 2 ಶಾಲೆಗಳಿಗೆ ಶೂ, ಸಾಕ್ಸ್ ಬದಲಾಗಿದೆ ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ.

gadag school students

ಲಕ್ಷ್ಮೇಶ್ವರ ಬಸ್ತಿಬಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಹಾಗೂ ಕೆಂಚಲಪೂರ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ನೀಡಲಾಗಿದೆ. ಒಂದೇ ಮನೆಯಿಂದ ಬೇರೆ ಬೇರೆ ಶಾಲೆಗೆ ಹೋಗುವ ಮಕ್ಕಳಲ್ಲಿ ಶೂ-ಚಪ್ಪಲಿ ವಿಷಯವಾಗಿ ಗಲಾಟೆಗಳು ನಡೆದಿವೆ ಎನ್ನಲಾಗಿದೆ. ಸರ್ಕಾರ ಶೂ, ಸಾಕ್ಸ್ ವಿಷಯದಲ್ಲಿ ಮಕ್ಕಳಲ್ಲಿ ದ್ವಂದ್ವ ನೀತಿ ಮೂಡಿಸಿದೆ. ಇದು ಖಂಡನೀಯ, ಶಿಕ್ಷಣ ಇಲಾಖೆ ಆದೇಶದಿಂದ ಮಕ್ಕಳಿಗೆ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂಬ ಆರೋಪ ಪಾಲಕರದ್ದಾಗಿದೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

gadag school 3

ಸರ್ಕಾರ ರಾಜ್ಯದ ಆಯಾ ಭಾಗದ ಪರಿಸರಕ್ಕೆ ಹೊಂದಿಕೆ ಆಗುವಂತಹ ಶೂ ಅಥವಾ ಚಪ್ಪಲಿ ಖರೀದಿಸಬಹುದು ಎಂದು ಆದೇಶ ಹೊರಡಿಸಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು ಅಲ್ಲಿ ಶೂ ಒಳ್ಳೆಯದು. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ಹೆಚ್ಚಿರುವ ಹಿನ್ನೆಲೆ ಬೆವರಿನಿಂದ ಶೂ ವಾಸನೆ ಬರುತ್ತವೆ. ಹೀಗಾಗಿ ಚಪ್ಪಲಿ ಖರೀದಿಸಬಹುದು ಎಂದು ಆದೇಶಿಸಲಾಗಿದೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದ 2 ಶಾಲೆಗಳಲ್ಲಿ ಶೂ ಭಾಗ್ಯ ಬದಲು ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ. ಉತ್ತಮ ಗುಣಮಟ್ಟದ ಶೂ ಅಥವಾ ಪಾದರಕ್ಷೆಗಳನ್ನು ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿ ಆಯಾ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲಾಗಿದೆ. ಗದಗ ಭಾಗದಲ್ಲಿ ವಾತಾವರಣಕ್ಕೆ ಶೂ ಗಿಂತ ಚಪ್ಪಲಿ ಒಳ್ಳೆಯದೆಂದು ಖರೀದಿಸಲಾಗಿದೆ. ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲಾಗುತ್ತದೆ. ಶೂ ಅಥವಾ ಚಪ್ಪಲಿ ಖರೀದಿ ನಿರ್ಧಾರ ಎಸ್‌ಡಿಎಂಸಿ ತೆಗೆದುಕೊಳ್ಳುತ್ತದೆ. ಈ ಹಣ ರಾಜ್ಯ ಕಚೇರಿಯಿಂದ ಬಿಇಒ ಕಚೇರಿಗೆ ನೇರವಾಗಿ ಬಿಡುಗಡೆ ಆಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಜಿಲ್ಲೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮತ್ತೊಂದೆಡೆ ವಿತರಿಸಿದ ಶೂ ಹಾಗೂ ಚಪ್ಪಲಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಒಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳಿಗೆ ಶೂ ಭಾಗ್ಯ ಬದಲು ಚಪ್ಪಲಿ ಭಾಗ್ಯ ಬಂದಿದ್ದು ಮುಜುಗರಕ್ಕೀಡಾಗಿದೆ. ಸರ್ಕಾರ, ಶಿಕ್ಷಣ ಇಲಾಖೆಯ ಈ ನಿಲುವು ಮಕ್ಕಳಿಗೆ ಹಾಗೂ ಪಾಲಕರಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ: ಹಬ್ಬಕ್ಕೆ ಬಟ್ಟೆ ಕೊಂಡೊಯ್ಯುತ್ತಿದ್ದ ಪುರಸಭೆ ಸದಸ್ಯನ ತಡೆದು ಮಾರಕಾಸ್ತ್ರದಿಂದ ಹಲ್ಲೆ

Share This Article