ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯ ಆನ್‍ಫೀಲ್ಡ್ ನಲ್ಲೇ ಗರಂ ಆಗಿದ್ದು, ಕ್ಯಾಚ್ ಪಡೆಯಲು ಅಡ್ಡ ಬಂದ ಬ್ಯಾಟ್ಸ್ ಮನ್ ವಿರುದ್ಧ ಅಂಪೈರ್ ಬಳಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಮೊದಲ ಟಿ20 ಪಂದ್ಯದ 8 ಓವರ್ ವೇಳೆ ಘಟನೆ ನಡೆದಿದ್ದು, ಕೃಣಾಲ್ ಪಾಂಡ್ಯ ಬೌಲಿಂಗ್ ಎದುರಿಸಿದ್ದ ವಿಲಿಯಮ್ಸನ್ ತಮ್ಮ ಮೊದಲ ಎಸೆತದಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಈ ವೇಳೆ ಚೆಂಡು ಬ್ಯಾಟಿಗೆ ತಾಗಿ ನೇರ ಬೌಲರ್ ಬಲಗಡೆಗೆ ಚಿಮ್ಮಿತು. ಇತ್ತ ಕ್ಯಾಚ್ ಪಡೆಯಲು ಕೃಣಾಲ್ ಡೈವ್ ಮಾಡುವ ಪ್ರಯತ್ನ ಮಾಡಿದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಸಿಫರ್ಟ್ ಪಾಂಡ್ಯಗೆ ಆಡ್ಡ ಬಂದಿದ್ದರು. ಇದರಿಂದ ಕ್ಷಣ ಕಾಲ ಗರಂ ಆದ ಕೃಣಾಲ್ ಅಂಪೈರ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
https://twitter.com/WastingBalls/status/1093060649297629184
ಈ ವೇಳೆ ಕೃಣಾಲ್ ರನ್ನು ಸಮಾಧಾನ ಪಡಿಸಲು ಯತ್ನಿಸಿದ ಅಂಪೈರ್ ತಾಳ್ಮೆ ಕಳೆದುಕೊಳ್ಳದಂತೆ ಸಲಹೆ ನೀಡಿದರು. ಬ್ಯಾಟ್ಸ್ ಮನ್ ವಿರುದ್ಧ ಅಸಮಾಧಾನದಿಂದಲೇ ಆಟ ಮುಂದುವರಿಸಿದ ಕೃಣಾಲ್ ತಮ್ಮ ಸ್ಪೆಲ್ ಪೂರ್ಣಗೊಳಿಸಿದರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಕೂಡ ಅಂಪೈರ್ ಬಳಿ ಬಂದು ಮಾತುಕತೆ ನಡೆಸಿದರು. ಅಂತಿಮವಾಗಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿಲಿಯಮ್ಸನ್ 22 ಎಸೆತಗಳನ್ನು ಎದುರಿಸಿದ 3 ಸಿಕ್ಸರ್ ಗಳ ನೆರವಿನಿಂದ 34 ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ನ್ಯೂಜಿಲೆಂಡ್ 80 ರನ್ ಅಂತರದ ಜಯ ಪಡೆಯಿತು. ಸ್ಫೋಟಕ ಪ್ರದರ್ಶನ ನೀಡಿದ ಸಿಫರ್ಟ್ ಪಂದ್ಯ ಶ್ರೇಷ್ಠ ಗೌರವ ಪಡೆದರು.
ಉಳಿದಂತೆ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಸಹೋದರು ಆಡಿದ್ದರು. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಈ ಇಬ್ಬರು ಒಂದೇ ಪಂದ್ಯದಲ್ಲಿ ಆಡಿದ್ದರು ಕೂಡ, ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಆಡಿದ್ದು ಮೊದಲ ಬಾರಿ ಆಗಿದೆ. ಪಂದ್ಯದಲ್ಲಿ ಕೃಣಾಲ್ 37 ರನ್ ನೀಡಿ 1 ವಿಕೆಟ್ ಪಡೆದರೆ, ಹಾರ್ದಿಕ್ 51 ರನ್ ನೀಡಿ 2 ವಿಕೆಟ್ ಪಡೆದರು. ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ಒಟ್ಟಿಗೆ ಆಡುತ್ತಿರುವ 3ನೇ ಜೋಡಿ ಇದಾಗಿದ್ದು, ಈ ಹಿಂದೆ ಸುರೀಂದರ್, ಮೊಹಿಂದರ್ ಅಮರನಾಥ್ ಹಾಗು ಯೂಸುಫ್, ಇಫಾರ್ನ್ ಪಠಾಣ್ ಸಹೋದರು ಒಂದೇ ಪಂದ್ಯದಲ್ಲಿ ಆಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv