ಮೈಸೂರು: ದಸರಾ ಉದ್ಘಾಟನೆ ವೇಳೆ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ ತೋರಲಾಗಿದೆ.
ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಎಸ್.ಎಲ್ ಭೈರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಬೇಕಿತ್ತು. ಏಕೆಂದರೆ ದಸರಾ ಉದ್ಘಾಟನೆಗೆ ಮೆರವಣಿಗೆ ಮೂಲಕ ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಉದ್ಘಾಟನಕಾರ ಎಸ್.ಎಲ್ ಭೈರಪ್ಪ ಅವರನ್ನೇ ಸರ್ಕಾರ ಹಾಗೂ ಮಂತ್ರಿಗಳು ಮರೆತು ಬಿಟ್ಟಿದ್ದರು.
ಸಿಎಂ ಯಡಿಯೂರಪ್ಪ ಅವರು ಭೈರಪ್ಪ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಮಹಿಷಾ ಪ್ರತಿಮೆಯಿಂದ ವೇದಿಕೆಗೆ ಕರೆದೊಯ್ಯಬೇಕಿತ್ತು. ಹೀಗಾಗಿ ಭೈರಪ್ಪ ಅವರು ಸಿಎಂಗಾಗಿ 30 ನಿಮಿಷಗಳ ಕಾಲ ಮಹಿಷಾ ಪ್ರತಿಮೆ ಬಳಿ ನಿಲ್ಲಿಸಿಕೊಂಡ ಕಾರಿನಲ್ಲೇ ಕುಳಿತಿದ್ದರು. ಅರ್ಧ ಗಂಟೆಯಾದರೂ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಬರಲೇ ಇಲ್ಲ. ಹೀಗಾಗಿ ಯಡಿಯೂರಪ್ಪ ಹಾಗೂ ಸಚಿವರೆಲ್ಲಾ ಸಾಗಿದ ಮೇಲೆ ಭೈರಪ್ಪ ಅವರು ಬೇಸರದಿಂದ ಒಬ್ಬರೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದರು.
ಸಾಹಿತಿ ಎಸ್.ಎಲ್. ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಕೊಟ್ಟಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.