– ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸ್ತಾರೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಅನರ್ಹ ಶಾಸಕ ಕೆ.ಸುಧಾಕರ್ ಅವರು ಇಂದು ಬೆಳಗ್ಗೆ ಭೇಟಿ ನೀಡಿ, ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ.
ಸಿಎಂ ಭೇಟಿಯ ಬಳಿಕ ಮಾತನಾಡಿದ ಸುಧಾಕರ್ ಅವರು, ಸಿ.ಎಂ.ಯಡಿಯೂರಪ್ಪನವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹಾಗಾಗಿ ಈಗ ಅವರ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದೇನೆ. ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಅಷ್ಟೇ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ಆದರೆ ಹಿಂದನ ಸರ್ಕಾರ ಅನುದಾನ ನೀಡಲಿಲ್ಲ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಮುಂದಿನ ವಾರದಲ್ಲಿ ಅನುದಾನ ನೀಡಬಹದು ಎಂದು ತಿಳಿಸಿದರು.
Advertisement
Advertisement
ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಗುಡುಗಿದ ಸುಧಾಕರ್ ಅವರು, ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸುತ್ತಾರೆ. ಶಾಸಕರನ್ನು ಅನರ್ಹಗೊಳಿಸಿದ ಅವರ ಆದೇಶ ಅನೈತಿಕವಾದದ್ದು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇವೆ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದರು.
Advertisement
ರಮೇಶ್ ಕುಮಾರ್ ಅವರಂತಹ ನಾಯಕರಿಂದ ಸಂವಿಧಾನಕ್ಕೆ ಅಪಚಾರ ಆಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ನಿಧಾನವಾದರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸವಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷದಲ್ಲಿನ ರಾಜಕೀಯ ಧೋರಣೆಯಿಂದ ಮನನೊಂದಿದ್ದೇನೆ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
Advertisement
ಗೆಲ್ಲಿಸುವವನು, ಸೋಲಿಸುವವನು ಮೇಲಿದ್ದಾನೆ. ಯಾರನ್ನ ಗೆಲ್ಲಿಸಬೇಕು ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಎಲ್ಲಿಂದಲೋ ಕಾಲರ್ ಏರಿಸಿಕೊಂಡು ಬಂದರೆ ಜನ ಮತ ಹಾಕಲ್ಲ. ಅತಿರಥ ಮಹಾರಥರೆಲ್ಲಾ ರಾಜ್ಯ ಸುತ್ತಿದರೂ ಒಂದೇ ಸೀಟು ಗೆದ್ದಿದ್ಯಾಕೆ? ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನು ಜನರು ಗೆಲ್ಲಿಸುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.