ಕಾರವಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹ ಮಾಡುತ್ತಿದ್ದಂತೆ ಮುಂಬೈನಲ್ಲಿದ್ದ ಶಾಸಕರು ಒಬ್ಬೊಬ್ಬರಂತೆ ತಮ್ಮ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗಿದ್ದಾರೆ. ಶುಕ್ರವಾರ ಯಲ್ಲಾಪುರ ಕ್ಷೇತ್ರದ ವಿವಿಧ ಭಾಗದಲ್ಲಿ ಆಪ್ತ ವಲಯ ಹಾಗೂ ಕಾರ್ಯಕರ್ತರೊಂದಿಗೆ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ಸಭೆ ನಡೆಸಲಿದ್ದಾರೆ. ಜೊತೆಗೆ ತಮ್ಮ ನಿಲುವಿಗೆ ಬದ್ಧರಾಗಿರುವ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡಲಿದ್ದಾರೆ.
ಶಿವರಾಮ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ ಹೋಗಿ ಸೇರಿದ್ದರು. ಸುಮಾರು ಮೂರು ವಾರಗಳ ಕಾಲ ಅತೃಪ್ತ ಶಾಸಕರು ತಮ್ಮ ಸ್ವ-ಕ್ಷೇತ್ರವನ್ನು ಮರೆತು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಈಗ ರಮೇಶ್ ಕುಮಾರ್ ಅವರು ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದಾರೆ.
ಶಿವರಾಮ್ ಹೆಬ್ಬಾರ್ ಅವರು ಈಗಾಗಲೇ ಎರಡು ಬಾರಿ ಕ್ಷೇತ್ರಕ್ಕೆ ಬಂದು ವಾಪಸ್ ಹೋಗಿದ್ದರು. ಮಾಜಿ ಸ್ಪೀಕರ್ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ ನಂತರ ಒಬ್ಬೊಬ್ಬರಂತೆ ಮುಂಬೈನಿಂದ ತಮ್ಮ ಕ್ಷೇತ್ರಕ್ಕೆ ವಾಪಸ್ ಬರುತ್ತಿದ್ದಾರೆ. ಮಂಗಳವಾರ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಅವರು ಇಬ್ಬರು ಒಟ್ಟಿಗೆ ಆಗಮಿಸಿದ್ದರು.