ಸವದಿ ಬೇಜವಾಬ್ದಾರಿ ಹೇಳಿಕೆಯಿಂದ ಹಾಳಾದ್ರು, ಇನ್ನೂ ಹಾಳಾಗ್ತಾರೆ: ರಮೇಶ್ ಜಾರಕಿಹೊಳಿ

Public TV
2 Min Read
Ramesh Jarkiholi Laxman Savadi

– ಸತೀಶ್ ಜಾರಕಿಹೊಳಿ ವಿರುದ್ಧವೂ ಏಕವಚನದಲ್ಲಿ ವಾಗ್ದಾಳಿ

ಬೆಳಗಾವಿ: ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅಹರ್ನ ಶಾಸಕರು, ಲಕ್ಷ್ಮಣ ಸವದಿ ಬೇಜವಾಬ್ದಾರಿಯಿಂದ ಹಾಳಾಗಿದ್ದಾರೆ, ಇನ್ನೂ ಹಾಳಾಗುತ್ತಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದು ಟಾಂಗ್ ನೀಡಿದರು. ಬಿಜೆಪಿ ಮುಖಂಡ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಅವರಿಗೆ ಸರಿಯಾದ ಉತ್ತರ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.

Ramesh Jarkiholi

ಡಿಸಿಎಂ ಸ್ಥಾನದ ಮಹತ್ವ ಗೊತ್ತಿಲ್ಲ. ಸೋತರೂ ಡಿಸಿಎಂ ಸ್ಥಾನ ಸಿಕ್ಕಿದ್ದಕ್ಕೆ ಸೊಕ್ಕಿದೆ. ಆ ಸೊಕ್ಕನ್ನು ದೇವರು ಮುರಿಯುತ್ತಾನೆ. ಹತ್ತು ತಲೆ ರಾವಣ ಹಾಳಾಗಿದ್ದಾನೆ. ಈ ಮನುಷ್ಯ ಯಾವನು ಎಂದು ಏಕವಚನದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದರು.

ಸುಪ್ರೀಂ ಕೋರ್ಟ್ ಅನರ್ಹತೆ ಅರ್ಜಿ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ತೀರ್ಪು ಹೇಗಿದ್ದರೂ ಚುನಾವಣೆಗೆ ನಿಲ್ಲುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ಅವಕಾಶ ನಿಲ್ಲುವ ಅವಕಾಶ ದೊರೆಯುವ ಭಾವನೆಯಿದೆ. ನಾನು ಚುನಾವಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

satish jarakiholi 1

ಮಾಜಿ ಸಚಿವ, ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಗೊಳಿ, ಸತೀಶ್ ಮಾಡಿರುವ ದ್ರೋಹವನ್ನು ಕಥೆ ಮಾಡಿದರೆ ಅವನು ಮನೆಗೆ ಓಡಿಹೋಗುತ್ತಾನೆ. ಹುಚ್ಚನಂತೆ ಓಡಾಡುತ್ತಾ ಹೇಳಿಕೆ ನೀಡುತ್ತಿದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿತ್ತು. ಅವನೊಬ್ಬ ನಾಯಕನಲ್ಲ, ಅವನೊಬ್ಬ ಷಂಡ ಎಂದು ಏಕವಚನದಲ್ಲೇ ಗುಡುಗಿದರು.

ಜಾರಕಿಹೊಳಿ ಕುಟುಂಬಕ್ಕೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಮತ್ತು ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತುಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿ ಕಾರಿದರು.

Ramesh Jarkiholi HDK

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಪ್ರಯಾಣ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ಎಚ್.ಡಿ.ದೇವೇಗೌಡ ಅವರ ಕುಟುಂಬದೊಂದಿಗೆ ನನ್ನ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಕುಮಾರಸ್ವಾಮಿ ಅವರೊಂದಿಗಿನ ನನ್ನ ಪ್ರಯಾಣ ದೊಡ್ಡ ವಿಷಯವಲ್ಲ, ಅದರಲ್ಲಿ ವಿಶೇಷತೆ ಏನೂ ಇಲ್ಲ. ಪ್ರಯಾಣದ ವೇಳೆ ರಾಜಕೀಯ ವಿಚಾರಗಳ ಚರ್ಚೆಯಾಗಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *