ಬೆಳಗಾವಿ: ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರಿಗೆ ಹೇಳಿದ್ದೇನೆ. ದೊಡ್ಡಣ್ಣನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಇನ್ನು ಸ್ಪರ್ಧೆ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ಸಹೋದರ ರಮೇಶ್ ಕುಮಾರ್ ಅವರನ್ನು ಭೇಟಿಯಾಗಲ್ಲ ಎಂಬ ಲಖನ್ ಜಾರಕಿಹೊಳಿ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅನರ್ಹ ಶಾಸಕರು, ದೊಡ್ಡವನಾಗಿ ತಿಳುವಳಿಕೆ ಹೇಳಿದ್ದೇನೆ. ನಾಮಪತ್ರ ಸಲ್ಲಿಸಿದ ಬಳಿಕ ಸ್ಪರ್ಧೆಯನ್ನ ಎದುರಿಸಲೇ ಬೇಕು. ಅದು ಯಾರೇ ಆಗಿದ್ದರೂ ಸರಿ ಎಂದರು.
ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ನಾವು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಸೋಮವಾರ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂಬ ವಿಶ್ವಾಸವಿದೆ. ಉಪ ಚುನಾವಣೆ ಸಂಬಂಧ ಗುರುವಾರ ಕ್ಷೇತ್ರದ ಜನರು ಹಾಗೂ ಬೆಂಬಲಿಗರ ಜೊತೆಗೆ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಎಂದು ಮಾಧ್ಯಮಗಳು ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ, ಈಗ ಎನೂ ಹೇಳುವುದಿಲ್ಲ. ಮುಂದೆ ಮಾತನಾಡುತ್ತೇನೆ ಎಂದು ಜಾರಿಕೊಂಡರು.