ಚಿಕ್ಕೋಡಿ: ಅನರ್ಹ ಶಾಸಕ ಮಹೇಶ ಕುಮಟಳ್ಳಿಗೆ ಸಂತ್ರಸ್ತರು ಮತ್ತೊಮ್ಮೆ ದಿಗ್ಬಂಧನ ಹಾಕಿದ್ದು, ರಾಜೀನಾಮೆ ಕೊಟ್ಟಿದ್ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಜೀರೋ ಪಾಯಿಂಟ್ ಬಳಿ ಸಂತ್ರಸ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂತ್ರಸ್ಥರ ಭೇಟಿಗೆ ತೆರಳಿದ್ದ ಕುಮಟಳ್ಳಿಗೆ ರಾಜೀನಾಮೆ ಕೊಟ್ಟಿದ್ಯಾಕೆ ಎಂದು ಸಂತ್ರಸ್ತರು ಪ್ರಶ್ನಿಸಿದ್ದಾರೆ. ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆ ಮುತ್ತಿಗೆ ಹಾಕಿದ್ದು, ಮಹೇಶ ಕುಮಟಳ್ಳಿ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕುಮಟಳ್ಳಿ ಹಾಗೂ ಸಂತ್ರಸ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಯಾಕೆ ಎಂದು ಸಂತ್ರಸ್ತರು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಸಹ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಜನತೆ ತರಾಟೆಗೆ ತೆಗೆದುಕೊಂಡಿದ್ದರು. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್‍ನಲ್ಲಿ ತಿಂಗಳುಕಾಲ ತಂಗಿದ್ದ ಅನರ್ಹ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಗ್ರಾಮಸ್ಥರು ಅವಾಚ್ಯ ಪದಗಳಿಂದ ನಿಂದಿಸಿದ್ದರು.
ನಾವು ಮತ ಹಾಕಿದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು. ನೀವು ರಾಜೀನಾಮೆ ನೀಡಿ ಮುಂಬೈಗೆ ಹಾರಲು ಅಲ್ಲ. ಶಾಸಕರಾಗಿ ಹದಿನಾಲ್ಕು ತಿಂಗಳಾಯಿತು. ಈಗ ನೆನಪಾಯಿತೇ ಎಂದು ಪ್ರಶ್ನಿಸಿ ಮಹೇಶ್ ಕುಮಟಳ್ಳಿ ಹಾಗೂ ದರೂರ ಜಿಲ್ಲಾ ಪಂಚಾಯತ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.