ಹಾವೇರಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದ್ರೋಹಿ. ಕಾಂಗ್ರೆಸ್ ಬೆಂಬಲದಿಂದ ಸಿಎಂ ಆದರು, ಒಬ್ಬರಿಗಾದರೂ ಧನ್ಯವಾದ ಹೇಳಿದರಾ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ತಾಲೂಕಿಗೆ ಇದೆ. ಎಲ್ಲ ಜನರ ಕಾಣಿಕೆ ಹಣ ತೆಗೆದುಕೊಂಡು ಚುನಾವಣೆಗೆ ಡೆಪಾಸಿಟ್ ಮಾಡಿದ್ದೆ. ಈಗಲೂ ಕಾರ್ಯಕರ್ತರ ಹಣವೇ ಡಿಪಾಸಿಟ್ ಆಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
Advertisement
ಇಂದು, ಇಲ್ಲವೆ ನಾಳೆಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಜನರ ಆದೇಶ ಪಡೆದುಕೊಂಡಿದ್ದೆ. ರಾಜೀನಾಮೆಯ ನಂತರ ಕಾರ್ಯಕರ್ತರನ್ನು ಸಾಮೂಹಿಕವಾಗಿ ಭೇಟಿ ಆಗಿರಲಿಲ್ಲ. ರಾಜೀನಾಮೆಗೆ ಕಾರಣ ಹೇಳಿರಲಿಲ್ಲ. 2004ರಿಂದ ಈಗಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ನನ್ನ ಪ್ರತಿಸ್ಪರ್ಧಿ. ಜನ ನನ್ನ ಕೈ ಹಿಡಿಯುತ್ತಾರೆ. ಮುಂದಿನ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಪಟ್ಟಕ್ಕೆ ಕೂರಿಸಲಾಯ್ತು. ಮಾತೆತ್ತಿದರೆ ಬ್ರದರ್ ಅಂತಾ ಚೆನ್ನಾಗಿ ಮಾತನಾಡುತ್ತಾರೆ. ಆಗ ಕುಮಾರಸ್ವಾಮಿ ನನ್ನ ಮಗಳಿಗೆ ಫೋನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಟ್ಟಿದ್ದಾರೆ ಅದರ ಡಬಲ್ ಕೊಡುತ್ತೇನೆ ಎಂದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಬಿ.ಸಿ.ಪಾಟೀಲ್ ಹಣಕ್ಕೆ ಆಸೆ ಪಡುವ ವ್ಯಕ್ತಿಯಲ್ಲ ಎಂದು ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಯಾವ ಮಂತ್ರಿ ಸ್ಥಾನ ಕೇಳುತ್ತಾರೆ ಅದನ್ನು ಕೊಡುತ್ತೇನೆ ಎಂದರು. ಜಿಲ್ಲೆಯ ಏಕೈಕ ಶಾಸಕನಾಗಿದ್ದೆ. ಮೂರು ಬಾರಿ ಕರೆದು ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿದರು. ಮಂತ್ರಿ ಇರದಿದ್ದರೆ ಪರವಾಗಿಲ್ಲ. ಅಭಿವೃದ್ಧಿಗೆ ಸರಿಯಾದ ಹಣ ನೀಡಲ್ಲ. ಆಡಳಿತ ಮಾತ್ರ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿತ್ತು. ಮಂಡ್ಯ ಜಿಲ್ಲೆಗೆ ಎಂಟು ಸಾವಿರ ಕೋಟಿ ರೂ. ನೀಡಿದರು. ನಮ್ಮ ಜಿಲ್ಲೆಗೆ ಒಂದು ಸಾವಿರ ಕೋಟಿಯನ್ನೂ ಕೊಡಲಿಲ್ಲ. ಕೆರೆ ತುಂಬಿಸುವುದಕ್ಕೂ ಡಿಕೆಶಿ ಭೇಟಿ ಮಾಡಿದ್ದೆ. ಏನೂ ಪ್ರಯೋಜನವಾಗಲಿಲ್ಲ ಎಂದರು.
ಮಾಜಿ ಸ್ಪೀಕರ್ ರಮೇಶಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಮೇಶ್ ಕುಮಾರ್ ಮಾತಿನಲ್ಲಿ ಹರಿಶ್ಚಂದ್ರ, ಮಾಡೋದೆಲ್ಲ ಕೆಟ್ಟ ಕೆಲಸಗಳೇ ಸರ್ಕಾರಿ ಭೂಮಿ ಲೂಟಿ ಹೊಡೆದಿದ್ದಾರೆ. ಕೊಲೆ ಕೇಸ್ ಗಳಲ್ಲಿದ್ದಾರೆ. ಇಂಥವರು ನಮ್ಮನ್ನು ಅನರ್ಹ ಮಾಡಿದರು. ಜಾತಿ ಬೇಧ ಎನಿಸದೆ ಕೆಟ್ಟ ಸರಕಾರ ಕಿತ್ತೊಗೆಯಲು ಒಂದಾದೆವು. ಅಷ್ಟು ಕೋಟಿ ತಗೊಂಡಿದ್ದಾರೆ. ಇಂಥವರಿಗೆ ಮತ ಹಾಕುತ್ತೀರಾ ಅಂತಾರೆ. ಕೆಟ್ಟ ಸರ್ಕಾರ ತೆಗೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿ. ಮುಂದೆ ಎಲ್ಲರಿಗೂ ನ್ಯಾಯ ಸಿಗುತ್ತೆ. ಹಿಂದೆ ಖಾಕಿ ಬಟ್ಟೆ ತೊಟ್ಟು ಜನರ ರಕ್ಷಣೆ ಮಾಡಿದ್ದೇನೆ. ಈಗಲೂ ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಬೆಂಕಿ ಹಚ್ಚೋ ಜನ ಇರುತ್ತಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ಬಿ.ಸಿ.ಪಾಟೀಲ್ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.