Connect with us

Bengaluru Rural

ನಮ್ಮನ್ನು ಯಾರೂ ಫ್ಲೈಟ್ ಹತ್ತಿಸಿಲ್ಲ, ನಾವೇ ಹೋಗಿದ್ದು- ಎಂಟಿಬಿ

Published

on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವೈರಲ್ ಆಡಿಯೋ ಇದೀಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದು, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಪರಿಣಾಮ ಅನರ್ಹ ಶಾಸಕರಿಗೆ ಭಯ, ಆತಂಕ ಶುರುವಾಗಿದೆ.

ಈ ಕುರಿತು ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ನಮ್ಮನ್ನ ಯಾರೂ ಫ್ಲೈಟ್ ಹತ್ತಿಸಿಲ್ಲ. ನಾವೇ ಹೋಗಿದ್ದು. ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಎಂಟಿಬಿ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ಆಗಲಿಲ್ಲ ಎಂದು ರಾಜೀನಾಮೆ ಕೊಟ್ಟಿರುವುದು. ಯಾರ ಮಾತು ಕೇಳಿ ನಾವ್ಯಾಕೆ ಫ್ಲೈಟ್ ಹತ್ತಿ ಹೋಗುತ್ತೇವೆ ಎಂದು ಪ್ರಶ್ನಿಸಿದರು.

ಇಂದು ಹೊಸಕೋಟೆ ಏತ ನೀರಾವರಿ ಯೋಜನೆಗೆ ಸಿಎಂ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಹೊಸಕೋಟೆಗೆ ಏತ ನೀರಾವರಿ ಯೋಜನೆ ತಂದಿದ್ದೇ ನಾನು. ನಾನು ಕಳೆದೆರಡು ಬಾರಿ ಶಾಸಕನಾಗಿದ್ದಾಗ ನೀರಾವರಿ ಯೋಜನೆಗಾಗಿ ಶ್ರಮಿಸಿದ್ದೇನೆ ಎಂದರು.

ಏತ ನೀರಾವರಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಂಸದ ಬಚ್ಚೇಗೌಡ ಬರೋ ವಿಚಾರದ ಸಂಬಂಧ ಮಾತನಾಡಿ, ಪ್ರೊಟೋಕಾಲ್ ಪ್ರಕಾರ ಆಹ್ವಾನವಿರುತ್ತದೆ. ಈ ಭಾಗದ ಸಂಸದರಾಗಿ ಅವರು ಬರುತ್ತಾರೆ. ನಾನು ಯೋಜನೆಗಾಗಿ ದುಡಿದಿದ್ದೇನೆ. ಅದಕ್ಕಾಗಿ ಸಿಎಂಗೆ ಸಹಕಾರ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದು ಎಂಟಿಬಿ ತಿಳಿಸಿದರು.

ಆಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಕಾರ್ಯಕರ್ತರೊಂದಿಗೆ ನಡೆಸಿದ್ದ ಸಭೆಯಲ್ಲಿ ಬಿಎಸ್‌ವೈ, ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈನಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು.

ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನೂ ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹೇಳಿದ್ದರು. ಈ ಆಡಿಯೋ ಇದೀಗ ಕಾಂಗ್ರೆಸ್ಸಿಗೆ ಸಿಕ್ಕಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಾಳೆ ಕೋರ್ಟಿನಲ್ಲಿ ವಿಚಾರಣೆ ಕೂಡ ನಡೆಯಲಿದೆ.

Click to comment

Leave a Reply

Your email address will not be published. Required fields are marked *