ನವದೆಹಲಿ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ (CBI) ತನಿಖೆಗೆ ನೀಡಿದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ಡಿಕೆಶಿ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.
ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ನೀಡಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಮತ್ತು ಸರ್ಕಾರ ಮಾಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರು ಮನವಿ ಮಾಡಿದರು. ಲೋಕಾಯುಕ್ತ ತನಿಖೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಒಂದು ವೇಳೆ ತನಿಖೆ ನ್ಯಾಯಬದ್ಧವಾಗಿಲ್ಲ ಎಂದಾದರೆ ಮತ್ತೆ ಸುಪ್ರೀಂಕೋರ್ಟ್ ಸಂಪರ್ಕ ಮಾಡಬಹುದು ಎಂದು ಸೂಚಿಸಿತು. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ
ಪ್ರತಿವಾದಿಗಳಾದ ಡಿ.ಕೆ ಶಿವಕುಮಾರ್ ಮತ್ತು ಸಿಬಿಐಗೆ ನೋಟಿಸ್ ನೀಡಲಾಗವುದು. ಸಿಬಿಐ ಈವರೆಗೂ ಯಾವುದೇ ಅರ್ಜಿ ಸಲ್ಲಿಸಿಲ್ಲ, ಅದರ ಮುಂದಿನ ನಡೆ ಏನು ಎಂಬುದನ್ನು ತಿಳಿಸಬೇಕು. ಡಿ.ಕೆ ಶಿವಕುಮಾರ್ ಮೂರು ವಾರಗಳಲ್ಲಿ ಅಕ್ಷಪಣೆ ಸಲ್ಲಿಸಲಿ. ಬಳಿಕ ಇನ್ನೊಂದು ವಾರದಲ್ಲಿ ಯತ್ನಾಳ್ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಬೇಕು ಎಂದ ಕೋರ್ಟ್ ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಏನಿದು ಪ್ರಕರಣ?
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತದಲ್ಲಿ ತನಿಖೆ ಮುಂದುವರೆಸಬಹುದು ಎಂದು ಆದೇಶದಲ್ಲಿ ತಿಳಿಸಿತ್ತು. ರಾಜ್ಯ ಸರ್ಕಾರ- ಸಿಬಿಐ ನಡುವೆ ಘರ್ಷಣೆಗೆ ಕಾರಣವಾದ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯತ್ನಾಳ್ ಮೇಲ್ಮನವಿ ಸಲ್ಲಿಸಿದ್ದರು.