– ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಹೂ ಬಿಡುತ್ತಿದ್ದ ಗಿಡಗಳು
– ಎಲೆ ಹಾಗೂ ಕಾಂಡದಲ್ಲಿ ಕಪ್ಪು ಮಚ್ಚೆ ರೋಗ
ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆ (Rain), ವಿಪರೀತ ಚಳಿ ಸೇರಿದಂತೆ ಪ್ರಕೃತಿ ವಿಕೋಪದಿಂದ, ಹಣ್ಣಿನ ರಾಜ ಮಾವು (Mango) ಬೆಳೆಗೆ ಅನೇಕ ರೋಗಗಳ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರಿಗೆ (Farmer) ಇಳುವರಿ ಕೊರತೆಯಾಗುವ ಆತಂಕ ಎದುರಾಗಿದೆ.
ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಇಲ್ಲಿಯವರೆಗೆ ಮಾವು ಹೂವು ಬಿಟ್ಟಿಲ್ಲ. ಅಲ್ಲದೇ ಮಾವು ಗಿಡದಲ್ಲಿ ಕಪ್ಪು ಮಚ್ಚೆ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಎಲೆ ಹಾಗೂ ಕಾಂಡದಲ್ಲಿ ರೋಗ ಕಂಡು ಬರುತ್ತಿರುವುದರಿಂದ ಇಳುವರಿ ಕಡಿಮೆಯಾಗಲಿದೆ.
ಗದಗ ಜಿಲ್ಲಾದ್ಯಂತ 600 ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ರಾಜಾ, ಆಪೂಸಾ, ಕಲ್ಮಿ, ಗಿರಿ, ಗೋಲ್ಡ್ ಮ್ಯಾಂಗೊ, ಗೋವಾ ಮ್ಯಾಂಗೊ ಸೇರಿದಂತೆ ಅನೇಕ ಜಾತಿಯ ಮಾವುಗಳನ್ನು ಬೆಳೆಯಾಗುತ್ತದೆ. ಕೆಂಪು ಮಣ್ಣಿನ ಪ್ರದೇಶದಲ್ಲಿ ಹೆಚ್ಚಾಗಿ ಈ ಮಾವನ್ನು ಬೆಳೆಯುದರಿಂದ ಗದಗ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಹೆಚ್ಚಾಗಿ ಮಾವು ಬೆಳೆ ಬೆಳೆಯಲಾಗಿದೆ.
ಶಿಲೀಂಧ್ರ ಕಣಗಳು ಗಾಳಿಯ ಸಹಾಯದಿಂದ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರಾಡುತ್ತಾ ಹೋಗುತ್ತಿರುತ್ತದೆ. ಇದರಿಂದಾಗಿ ಎಲ್ಲಾ ಮಾವಿನ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿದೆ. ಪ್ರತಿ ವರ್ಷ ನವೆಂಬರ್ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಮಾವಿನ ಗಿಡಗಳು ಹೂವು ಬಿಡುತ್ತಿದ್ದವು. ಈ ವರ್ಷ ಡಿಸೆಂಬರ್ ಕೊನೆಗೊಳ್ಳುತ್ತಿದ್ದರೂ ಹೂವು ಬಿಟ್ಟಿಲ್ಲ. ತೋಟಗಾರಿಕೆ ಇಲಾಖೆಯ ತಜ್ಞರು ಜನವರಿ ಎರಡನೇ ವಾರ ಹೂವು ಬಿಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಜನವರಿ ತಿಂಗಳು ಹೆಚ್ಚಾಗಿ ಇಬ್ಬನಿ ಬೀಳುವುದರಿಂದ ಇಳುವರಿ ಕಡಿಮೆಯಾಗಿ ರೋಗಗಳು ಹೆಚ್ಚಾಗುವ ಸಾಧ್ಯತೆಯಿದೆ.
ಇಳುವರಿ ಕುಂಠಿತವಾಗುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಈಗಿನಿಂದಲೇ ಮಾವು ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮಾವಿಗೆ ಬೂದು ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿ ಗಾತ್ರದ ಕಾಯಿಗಳು ಉದುರುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬೆಳೆಗಾರರು ಔಷಧಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ. ಮಾವು ತೋಟಗಳಲ್ಲಿ ಹೂವು ಬಿಡುವುದು ತಡವಾಗಿದ್ದು, ರೈತರು ಮಾವಿನ ಬೆಳೆಗೆ ಮ್ಯಾಂಗೋ ಸ್ಪೆಷಲ್ (ಲಘು ಪೋಷಕಾಂಶಗಳ ಮಿಶ್ರಣ) ಪೊಟ್ಯಾಶಿಯಂ ನೈಟ್ರೇಟ್, ಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಿದ್ದಾರೆ. ಇದರ ಜೊತೆ ಸೋಪಿನ ದ್ರಾವಣ, ನಿಂಬೆ ಹಣ್ಣಿನ ರಸ ಬೆರೆಸಿ ಸಿಂಪಡಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ಮಾವಿನ ಮರಗಳಲ್ಲಿ ಒಮ್ಮೆಲೇ ಹೂವು ಬಿಡಲು ಸಹಾಯವಾಗುತ್ತವೆ ಎನ್ನುತ್ತಾರೆ ಕೃಷಿ ತಜ್ಞರು.
ಈಗಾಗಲೇ ಮಾವು ರೋಗ ನಿಯಂತ್ರಣದ ಕುರಿತು ಕೃಷಿ ವಿಜ್ಞಾನ ಕೇಂದ್ರದಿಂದ ಕಾರ್ಯಕ್ರಮ ಹಾಗೂ ರೈತರಿಗೆ ತರಬೇತಿ ಮಾಡಲಾಗಿದೆ. ಪ್ರತಿ ವರ್ಷ 3 ರಿಂದ 4 ತಿಂಗಳಿಗೊಮ್ಮೆ ಮಾವು ಬೆಳೆಗಾರರಿಗೆ ತರಬೇತಿ ಮಾಡಲಾಗುತ್ತದೆ ಅಂತಿದ್ದಾರೆ ಗದಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಶಿಕಾಂತ ಕೋಟಿಮನಿ. ಒಟ್ಟಿನಲ್ಲಿ ಈ ಬಾರಿ ಪ್ರಕೃತಿ ವಿಕೋಪದಿಂದ ಮಾವು ಬೆಳಗಾರರು ಈ ಬಾರಿ ಸಾಕಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.