ಬೆಂಗಳೂರು: ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಉಪಚುನಾವಣೆಗೆ ಸಂಬಂಧಿಸಿ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಉಪಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆ ಆಗಬಹುದು. 3 ಉಪಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲುವ ದೃಷ್ಟಿಯಿಂದ ವಿಶೇಷ ಪ್ರಯತ್ನ ಮಾಡಬೇಕು ಎಂಬ ಚರ್ಚೆ ನಡೆದಿದೆ ಎಂದರು.ಇದನ್ನೂ ಓದಿ: ನೆಹರೂ ಕಾಲದಿಂದ ರಾಹುಲ್‌ವರೆಗೂ ಕಾಂಗ್ರೆಸ್ ಮೀಸಲಾತಿ ವಿರೋಧಿ – ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್
ಅಭ್ಯರ್ಥಿ ಸಂಬಂಧಿಸಿ ಎನ್‌ಡಿಎ (NDA) ಮಿತ್ರ ಪಕ್ಷವಾದ ಜೆಡಿಎಸ್ (JDS) ಮತ್ತು ನಮ್ಮ ಕೇಂದ್ರೀಯ ನಾಯಕರ ಜೊತೆ ಸಮಾಲೋಚನೆ ಮಾಡಿ, ನಿರ್ಣಯಿಸಲು ಕೋರ್ ಕಮಿಟಿ ನಿರ್ಧರಿಸಿದೆ. ಈ ಹಿಂದೆ ಶ್ರೀನಿವಾಸ ಪೂಜಾರಿಯವರು ಚುನಾಯಿತರಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಅ.21ರಂದು ನಡೆಯಲಿದೆ. ಆ ಉಪಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೋಗಿ ಅಪೇಕ್ಷಿತರ ವರದಿ ಹಾಗೂ 2 ಜಿಲ್ಲೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ್ದರು. ಕೇಂದ್ರೀಯ ನಾಯಕತ್ವದ ಜೊತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ ಎಂದು ತಿಳಿಸಿದರು.
ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಚರ್ಚಿಸಲಾಗಿದೆ. ಈ ಸರ್ಕಾರದ ಮೇಲೆ ನಿರಂತರವಾಗಿ ಬರುತ್ತಿರುವ ಆಧಾರಸಹಿತವಾದ ಭ್ರಷ್ಟಾಚಾರದ ಆರೋಪಗಳು, ಅದರ ವಿರುದ್ಧ ಇನ್ನಷ್ಟು ಜನಾಂದೋಲನ ರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಈ ಸರ್ಕಾರದ ಹಿಂದೂ ವಿರೋಧಿ ನೀತಿ, ಗಣೇಶೋತ್ಸವದ ಮೇಲೆ ನಿರ್ಬಂಧ ಹೇರುತ್ತಿರುವುದು, ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಮುಖಂಡರ ಮೇಲೆ ದಿಗ್ಬಂಧನವನ್ನು ಹಾಕುತ್ತಿರುವುದು, ಓಲೈಕೆಯ ರಾಜಕಾರಣ ಕುರಿತು ಚರ್ಚಿಸಿದ್ದೇವೆ. ಈ ಸಂಬಂಧ ಪರಿವಾರ ಸಂಘಟನೆಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಹೋರಾಟ ನಡೆಸುವ ಚಿಂತನೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಡೆದಿದೆ ಎಂದು ಹೇಳಿದರು.
ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು:
ನಮ್ಮ ಶಾಸಕ ಮುನಿರತ್ನ ಅವರ ಮೇಲೆ ಎಸ್‌ಐಟಿ (SIT) ರಚನೆ ಮಾಡಿದ್ದಾರೆ. ಇಂಥದ್ದೇ ಆಪಾದನೆಗಳು ಕಾಂಗ್ರೆಸ್ ಶಾಸಕರ ಮೇಲೆ ಬಂದಾಗ ಅವರಿಗೆ ಒಂದು ನೀತಿ, ಬಿಜೆಪಿ ಶಾಸಕರಿಗೆ ಮತ್ತೊಂದು ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸರ್ಕಾರ ಪೂರ್ವಗ್ರಹ ಪೀಡಿತವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸತ್ಯಾಸತ್ಯತೆ ತನಿಖೆ ನಡೆಸುವುದು ಬೇರೆ. ಪೂರ್ವಗ್ರಹ, ರಾಜಕೀಯ ದ್ವೇಷದಿಂದ ರಾಜಕಾರಣದಿಂದಲೇ ಸರಿಸಬೇಕೆಂದು ನಡೆಸುವ ಸಂಚು ಬೇರೆ. ಈ ಸರ್ಕಾರವು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸುವುದು ವ್ಯಕ್ತವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಾತನಾಡುವ ಇವರು ಸರ್ವಾಧಿಕಾರಿ, ಸಂವಿಧಾನ ಬಾಹಿರವಾಗಿ ದ್ವೇಷದ ನಡೆಯನ್ನು ತೋರುವ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಅರ್ಧಸತ್ಯವನ್ನಷ್ಟೇ ಹೇಳಿದ ಸಿಎಂ:
ಸಿಎಂ (CM Siddaramaiah) ತುಂಗಭದ್ರಾ ನದಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ರೀಡೂ ನಾನು ಮಾಡಿದ್ದೇನ್ರಿ. ಅದು ಸುಪ್ರೀಂಕೋರ್ಟ್ (Supreme Court) ಆದೇಶ ಎಂದಿದ್ದಾರೆ. ಸಿಎಂ ಅರ್ಧಸತ್ಯವನ್ನಷ್ಟೇ ಹೇಳಿದ್ದಾರೆ. ಸುಪ್ರೀಂಕೋರ್ಟ್ ಕೊಟ್ಟ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದೀರಿ. ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆಯೇ ಅದರ ತನಿಖೆಗೆ ಕೆಂಪಣ್ಣ ಆಯೋಗವನ್ನು ನೀವು ರಚಿಸಿದ್ದೀರಿ. ಬಂಡು ರಾಮಸ್ವಾಮಿ ಪ್ರಕರಣದಲ್ಲಿ 2010ರಲ್ಲಿ ತೀರ್ಪು ಕೊಡಲಾಗಿತ್ತು. 4 ವರ್ಷ ವರದಿಯನ್ನೂ ಕೊಡದೇ ಈಗ ನೀವು ಬೇಕಾಬಿಟ್ಟಿ 880 ಎಕರೆಗೂ ಹೆಚ್ಚು ಡಿನೋಟಿಫಿಕೇಶನ್ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಆ ಪ್ರಕರಣದಲ್ಲಿ ಗ್ರೀನ್ ಬೆಲ್ಟ್ ಇದ್ದರೆ, ಶಿಕ್ಷಣ ಸಂಸ್ಥೆಗಳಿದ್ದರೆ, ಚಾರಿಟೇಬಲ್ ಸಂಸ್ಥೆ ನಡೆಸುತ್ತಿದ್ದರೆ, ಸ್ಮಶಾನ ಇದ್ದರೆ, ನರ್ಸರಿ ಇದ್ದರೆ, ಕಟ್ಟಡಗಳಾಗಿ ಅಭಿವೃದ್ಧಿ ಆಗಿದ್ದರೆ, ಬಿಡಿಎ ಬಡಾವಣೆಗೆ ಸಂಪರ್ಕವೇ ಇಲ್ಲದಿದ್ದರೆ ಅದು ಕೇವಲ 6 ಗ್ರಾಮಕ್ಕೆ ಮಾತ್ರ ಡಿನೋಟಿಫಿಕೇಶನ್ ಪರಿಗಣನೆ ಎಂದು ತಿಳಿಸಿದ್ದಾರೆ.
ಕೆಂಪಾಪುರ, ಶ್ರೀರಾಮಪುರ, ವೆಂಕಟೇಶಪುರ, ನಾಗವಾರ, ಹೆಣ್ಣೂರು ಮತ್ತು ಚಳ್ಳಕೆರೆ ಅದರಡಿ 6 ಗ್ರಾಮಗಳು. ನೀವು ಅದನ್ನು ಬಿಟ್ಟು 16 ಹಳ್ಳಿಗಳಿಗೆ ಸಂಬಂಧಿಸಿದ, ಬಿಡಿಎ ಅಭಿವೃದ್ಧಿಪಡಿಸಿ, ಲೇಔಟ್ ಮಾಡಿ ನಿವೇಶನ ಹಂಚಿದ್ದ ಪ್ರದೇಶವನ್ನೂ ಡಿನೋಟಿಫಿಕೇಶನ್ ಮಾಡಿದ್ದೀರಿ. ನಿವೇಶನಕ್ಕೆ ಹಣ ಕಟ್ಟಿಸಿಕೊಂಡು ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಂಡು ಆಗಿತ್ತು. ಅದನ್ನೂ ಡಿನೋಟಿಫಿಕೇಶನ್ ಮಾಡಿ ನಿವೇಶನ ಹಂಚಿಕೆದಾರರು ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ಅವರಿಗೆ ಕೆಂಪೇಗೌಡ ಬಡಾವಣೆ, ಬೇರೆ ಬಡಾವಣೆ ತೋರಿಸುತ್ತಿದ್ದೀರಿ. ಅವರು ಅರ್ಕಾವತಿ ಬಡಾವಣೆಗೆ ಹಣ ಕಟ್ಟಿದ್ದರು. ಇದರಲ್ಲಿ ಯಾರ ಹಿತಾಸಕ್ತಿ ರಕ್ಷಿಸಿದ್ದೀರಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಮುನಿರತ್ನ ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ ದ್ವೇಷದ ರಾಜಕಾರಣ ಮಾಡ್ತಿದೆ: ಸಿ.ಟಿ.ರವಿ