– ಶೇ.28 ರಿಂದ ಶೇ.18ಕ್ಕೆ ತೆರಿಗೆ ಇಳಿಸಲು ಆಗ್ರಹ
– ಸೆ.20 ರಂದು ನಡೆಯಲಿದೆ ಜಿಎಸ್‍ಟಿ ಕೌನ್ಸಿಲ್ ಸಭೆ
– ಸಭೆಯಲ್ಲಿ ಇಳಿಕೆಯಾದ್ರೆ ಗ್ರಾಹಕರಿಗೆ ಬಂಪರ್
ನವದೆಹಲಿ: ಬಿಎಸ್6 ಎಂಜಿನ್ ಕಾರುಗಳನ್ನು ಮಾತ್ರ 2020ರ ಏಪ್ರಿಲ್1 ರಿಂದ ಮಾರಾಟ ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿರುವ ಅಟೋಮೊಬೈಲ್ ಕಂಪನಿಗಳು ಈಗ ಉತ್ಪಾದನೆಯಾಗಿರುವ ಕಾರುಗಳನ್ನು ಮಾರಾಟ ಮಾಡಲು ಭರ್ಜರಿ ಡಿಸ್ಕೌಂಟ್ ಆಫರ್‍ಗಳನ್ನು ಘೋಷಣೆ ಮಾಡಿದೆ.
ಎರಡು ತ್ರೈಮಾಸಿಕದಲ್ಲೂ ಕಾರು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕಾರು ಬೆಲೆಗಳು ಇಳಿಕೆಯಾಗಿರುವುದರಿಂದ ಗ್ರಾಹಕರು ಹಬ್ಬದ ಸಂದರ್ಭದಲ್ಲಿ ಖರೀದಿಸುವ ಸಾಧ್ಯತೆ ಹೆಚ್ಚಿದೆ.
Advertisement
Advertisement
ಹುಂಡೈಯ ಟುಸ್ಸಾನ್, ಎಲಾಂಟ್ರಾ, ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೇಜಾ ಹತ್ತಿರ ಹತ್ತಿರ 2 ಲಕ್ಷ ರೂ. ಡಿಸ್ಕೌಂಟ್ ಆಫರ್ ನೀಡಿದರೆ ಟಯೋಟಾ ಯಾರಿಸ್ ಬೆಲೆ 1.45 ಲಕ್ಷ ರೂ. ಇಳಿಕೆಯಾಗಿದ್ದರೆ ಕೊರೊಲಾ ಆಲ್ಟಿಸ್ 1.45 ಲಕ್ಷ ರೂ. ಇಳಿಕೆಯಾಗಿದೆ. ಇದನ್ನೂ ಓದಿ: ಜನ ಕಾರು ಇಟ್ಕೊಳ್ಳಲ್ಲ, ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!
Advertisement
ಮಾರುತಿ ಕಂಪನಿಯ ಅಲ್ಟೋ 800 ಮತ್ತು ಅಲ್ಟೋ ಕೆ10 ಬೆಲೆ 65 ಸಾವಿರ ಇಳಿಕೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಹೊಂದಿರುವ ಸ್ವಿಫ್ಟ್ ಬೆಲೆ ಕ್ರಮವಾಗಿ 55,000 ರೂ. ಮತ್ತು 84,000 ರೂ. ಕಡಿಮೆಯಾಗಿದೆ. ಸೆಲೆರಿಯೋ 65,000 ರೂ., 7 ಸೀಟ್ ಸಾಮರ್ಥ್ಯದ ಇಕೋ 50,000 ರೂ., 5 ಸೀಟ್ ಸಾಮರ್ಥ್ಯದ ಇಕೋ ಕಾರಿನ ಬೆಲೆ 40,000 ರೂ. ಇಳಿಕೆಯಾಗಿದೆ.
Advertisement
ಇಗ್ನಿಸ್ 50,000 ರೂ., ಪೆಟ್ರೋಲ್ ಇಂಜಿನ್ ಬಲೆನೊ 35,000 ರೂ. ಇಳಿಕೆಯಾಗಿದ್ದರೆ ಡೀಸೆಲ್ ಎಂಜಿನ್ ಬೆಲೆ 55,000 ರೂ. ಕಡಿಮೆಯಾಗಿದೆ. ಸಿಯಾಜ್ 55,000 ರೂ., ಎಸ್ ಕ್ರಾಸ್ ಬೆಲೆ 80,000 ರೂ. ಇಳಿಕೆಯಾಗಿದೆ. ಇದರ ಜೊತೆ ಮಾರುತಿ ಕಂಪನಿಯೂ ಸ್ವಿಫ್ಟ್, ಬ್ರಿಜಾ, ಡಿಸೈರ್, ಬಲೆನೊ, ಎಸ್ ಕ್ರಾಸ್, ಸಿಯಾಜ್ ಕಾರುಗಳಿಗೆ 5 ವರ್ಷದ ವಾರಂಟಿ ಘೋಷಿಸಿದೆ.
ಹುಂಡೈ ಕಂಪನಿಯ ಗ್ರ್ಯಾಂಡ್‍ಐ10, ಎಕ್ಸೆಂಟ್ 95,000 ರೂ. ಇಳಿಕೆಯಾಗಿದ್ದರೆ, ಐ20, ಐ20 ಆಕ್ಟೀವ್ ಮತ್ತು ವೆರ್ನಾ ಕಾರುಗಳು ಕ್ರಮವಾಗಿ 45,000 ರೂ., 25,000 ರೂ., 60,000 ರೂ. ಇಳಿಕೆಯಾಗಿದೆ. ಹುಂಡೈ ಕಂಪನಿಯ ಪ್ರಸಿದ್ಧ ಕ್ರೇಟಾ ಕಾರಿಗೆ 50,000, ಸ್ಯಾಂಟ್ರೋ ಕಾರಿಗೆ 40,000 ರೂ. ಡಿಸ್ಕೌಂಟ್ ಆಫರ್ ಪ್ರಕಟಿಸಿದೆ.
ಟಾಟಾ ಕಂಪನಿಯ 2018ರ ಮಾಡೆಲಿನ ಟಿಯಾಗೋ 70,000 ರೂ., ಟಿಗೋರ್ ಕಾರಿನ ಬೆಲೆ 1.70 ಲಕ್ಷ ರೂ. ಇಳಿಕೆಯಾಗಿದೆ. ನೆಕ್ಸಾನ್ ಡೀಸೆಲ್ ಮತ್ತು ಹೆಕ್ಸಾ ಕಾರಿನ ಬೆಲೆ ಕ್ರಮವಾಗಿ 87,500 ರೂ. ಮತ್ತು 1.5 ಲಕ್ಷ ರೂ. ಇಳಿಕೆಯಾಗಿದೆ. 2019ರ ಮಾಡೆಲಿನ ಟಿಯಾಗೋ 45,000, ಟಿಗೋರ್ ಪೆಟ್ರೋಲ್ 67,000, ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 57,500 ರೂ. ಕಡಿಮೆಯಾಗಿದೆ. 2019ರ ಹೆಕ್ಸಾ ಕಾರಿಗೆ 1ಲಕ್ಷ ರೂ. ಇಳಿಕೆಯಾಗಿದೆ.
ಫೋರ್ಡ್ ಕಂಪನಿ ಅಸ್ಪೈರ್ ಕಾರಿಗೆ 30,000 ರೂ. ಇಳಿಕೆ ಮಾಡಿದ್ದರೆ, ಇಕೋ ಸ್ಪೋರ್ಟ್ ಗೆ 15,000 ರೂ. ಇಳಿಕೆ ಮಾಡಿದೆ. ರೆನಾಲ್ಟ್ ಕ್ವಿಡ್ 40,000 ರೂ., ಕ್ಯಾಪ್ಟರ್ ಪ್ಲಾಟಿನ್ 1 ಲಕ್ಷ ರೂ., ಡೀಸೆಲ್ ಡಸ್ಟರ್ ಬೆಲೆ 1 ಲಕ್ಷ ರೂ. ಇಳಿಕೆಯಾಗಿದೆ.
ಮತ್ತಷ್ಟು ಇಳಿಕೆ ಆಗುತ್ತಾ?
ಕಾರುಗಳ ದರ ಇಳಿಕೆ ನಗರದಿಂದ ನಗರಕ್ಕೆ ಸ್ವಲ್ಪ ಬದಲಾವಣೆಯಾಗುತ್ತದೆ. ಸದ್ಯ ಈಗ ಅಟೋ ಕ್ಷೇತ್ರದ ಮೇಲೆ ಶೇ.28 ಜಿಎಸ್‍ಟಿ ಇದೆ. ಮಂದಗತಿಯ ಆರ್ಥಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಅಟೋ ಕಂಪನಿಗಳು ಈಗಾಗಲೇ ಶೇ.20ಕ್ಕೆ ಜಿಎಸ್‍ಟಿಯನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿದೆ. ಸರ್ಕಾರವೂ ಆರ್ಥಿಕತೆಯನ್ನು ಉತ್ತೇಜಿಸಲು ಕಳೆದ ಎರಡು ವಾರಗಳಿಂದ ನಾನಾ ಕ್ರಮಗಳನ್ನು ಪ್ರಕಟಿಸಿದೆ. ಬಿಎಸ್4 ಕಾರುಗಳ ಮಾರಾಟ 2020ರ ಏ.1 ರಿಂದ ನಿಷೇಧಿಸಿದ್ದರೂ ಆ ಕಾರುಗಳು 15 ವರ್ಷಗಳ ಕಾಲ ಸಂಚರಿಸಬಹುದು ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸೆ.20 ರಂದು ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಅಂದು ಶೇ.18ಕ್ಕೆ ಜಿಎಸ್‍ಟಿ ಇಳಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡರೆ ಕಾರುಗಳ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಆಫರ್ ಪ್ರಕಟಿಸಿದ್ದು ಯಾಕೆ?
ಈ ಹಿಂದೆ ಸರ್ಕಾರ 2017ರ ಏಪ್ರಿಲ್ 1 ರಿಂದ ಬಿಎಸ್3 ಮಾನದಂಡ ಇಂಜಿನ್ ಹೊಂದಿರುವ ಕಾರುಗಳ ಮಾರಾಟ ಮತ್ತು ನೋಂದಣಿ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಾರ್ಚ್ 29ರಂದು ಏಪ್ರಿಲ್ 1 ರಿಂದ ಯಾವುದೇ ಕಾರಣಕ್ಕೆ ಬಿಎಸ್3 ವಾಹನವನ್ನು ಮಾರಾಟ ಮಾಡಬಾರದು ಎಂದು ಖಡಕ್ ಆದೇಶವನ್ನು ಪ್ರಕಟಿಸಿತ್ತು. ಪರಿಣಾಮ ಆಟೋ ಕಂಪನಿಗಳು ಮತ್ತು ಡೀಲರ್ ಗಳು ಒಂದೇ ದಿನದಲ್ಲಿ ಬೈಕ್ ಬೆಲೆಯನ್ನು 20-30 ಸಾವಿರ ಇಳಿಕೆ ಮಾಡಿ ಭಾರೀ ಸಂಖ್ಯೆಯಲ್ಲಿ ಮಾರಾಟ ಮಾಡಿದ್ದರು.
ಈಗ ಬಿಎಸ್4 ಕಾರುಗಳ ಮಾರಾಟಕ್ಕೆ ಮಾರ್ಚ್ ಮಾರ್ಚ್ 31 ಕೊನೆಯ ದಿನವಾಗಿದೆ. ಹೀಗಾಗಿ ಕಾರುಗಳನ್ನು ಉತ್ಪಾದನೆ ಮಾಡಿದರೆ ಈ ಕಾರು ಮಾರಾಟವಾಗದೇ ಉಳಿದರೆ ಏನು ಮಾಡಬೇಕು ಎನ್ನುವ ಸಂಕಷ್ಟಕ್ಕೆ ಅಟೋ ಕಂಪನಿಗಳು ಸಿಲುಕಿವೆ. ಇದರ ಜೊತೆಗೆ ವಿಶ್ವದಲ್ಲಿ ಆರ್ಥಿಕ ಸಮಸ್ಯೆ ಜೋರಾಗಿರುವ ಕಾರಣ ಕಾರುಗಳ ಮಾರಾಟ ಸಹ ಇಳಿಕೆಯಾಗಿವೆ. ಈ ಕಾರಣದ ಜೊತೆಗೆ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸುವ ಕಾಲಘಟದ್ದಲ್ಲಿ ಇರುವ ಕಾರಣ ಈ ಕಾರುಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿದೆ. ಇದನ್ನೂ ಓದಿ: ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?
ಏನಿದು ಬಿಎಸ್-6?
ಭಾರತ್ ಸ್ಟೇಜ್(ಬಿಎಸ್) ಅಂದರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿದೆ. ಸದ್ಯ ಬಿಎಸ್-4 ಜಾರಿಯಲ್ಲಿದೆ. ಬಿಎಸ್-5 ಬದಲು ನೇರವಾಗಿ ಬಿಎಸ್-6 ಗುಣಮಟ್ಟದ ವಾಹನಗಳ ಮಾರಾಟ ವ್ಯವಸ್ಥೆಯನ್ನು 2020ರ ವೇಳೆಗೆ ಪರಿಚಯಿಸಲಾಗುತ್ತಿದೆ. ಈ ಬಗ್ಗೆ 2016ರಲ್ಲಿಯೇ ಕೇಂದ್ರ ಸರಕಾರ ನಿರ್ಧಾರ ಕೈಗೊಂಡು ಎಲ್ಲ ಅಟೋ ಕಂಪನಿಗಳಿಗೆ ಬಿಎಸ್-6 ಮಾನದಂಡ ಕಾರುಗಳನ್ನು ತಯಾರಿಸಿ ಎಂದು ಸೂಚಿಸಿತ್ತು.
ಬಿಎಸ್-4 ವಾಹನಗಳ ಮಾರಾಟಕ್ಕೆ 2020ರ ಮಾರ್ಚ್ 31ರ ನಂತರವೂ ಅವಕಾಶ ನೀಡಬೇಕೆಂದು ವಾಹನ ಕಂಪನಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಆದರೆ ಕೋರ್ಟ್ ಈ ಮನವಿಯನ್ನು ತಳ್ಳಿ ಹಾಕಿ 2020ರ ಏ.1ರಿಂದ ದೇಶಾದ್ಯಂತ ಭಾರತ್ ಸ್ಟೆಜ್ 4(ಬಿಎಸ್-4) ವಾಹನಗಳನ್ನು ಮಾರಾಟ ಹಾಗೂ ನೋಂದಣಿ ಮಾಡದಂತೆ ಆದೇಶಿಸಿದೆ.