ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕಳೆದ 10 ದಿನಗಳಿಂದ ಕರಾವಳಿ ಭಾಗದಲ್ಲಿ ವರುಣ ಆರ್ಭಟಿಸುತ್ತಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉಡುಪಿಯಲ್ಲಿ ಪಾಪನಾಶಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಠದ ಕುದ್ರು, ವಿಭುದೇಶ ತೀರ್ಥ ನಗರಕ್ಕೆ ನೀರುನುಗ್ಗಿದೆ. ಮಳೆ ನೀರಲ್ಲಿ ನಾಯಿಗಳು ಪರದಾಡಿವೆ. ಜನ ದೋಣಿ ಅವಲಂಬಿಸಿದ್ದಾರೆ. ಬೆಳ್ಳಾಲ, ನಂದ್ರೊಳ್ಳಿ ಕ್ಷೇತ್ರಪಾಲದಲ್ಲಿ ಮನೆ, ಉಪ್ಪುಂದದಲ್ಲಿ ಶಾಲಾ ಮೇಲ್ಛಾವಣಿ ಕುಸಿದಿವೆ.
ದಕ್ಷಿಣ ಕನ್ನಡದ ಮೊಗೆರ್ ಕುದ್ರುನಲ್ಲಿ ನೆರೆ ಇಳಿದಿಲ್ಲ. ಬಟ್ಟಪಾಡಿ ಕಡಲ ತೀರದಲ್ಲಿ ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಹೋಗಿದೆ. ರಸ್ತೆ ಸಂಪರ್ಕವಿಲ್ಲದೇ 30 ಮನೆಗಳ ಮಂದಿ ಪರದಾಡುವಂತಾಗಿದೆ. ಕಡಲ್ಕೊರೆತದಿಂದ ತತ್ತರಿಸಿರುವ ಕಾಪು ತಾಲೂಕಿನ ಮುಳೂರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದರು. ಸಚಿವರು ಬಂದಿರುವ ವಿಚಾರ ತಿಳಿದ ಜನ, ಪ್ರವಾಹದ ನೀರಿನಲ್ಲಿ ನಡೆದು ಬಂದಿದ್ದರು. ಇದಕ್ಕೆ ಸಚಿವೆಯೂ ಸ್ಪಂದಿಸಿದ್ದರು. ಬೈತಡ್ಕದ ಹೊಳೆಯಲ್ಲಿ ಮುಳುಗಿದ್ದ ಕಾರಿನಲ್ಲಿದ್ದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ
ಉತ್ತರ ಕನ್ನಡದ ಹಲವೆಡೆಯೂ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಜೋಯಿಡಾದ ಕಾತೇಲಿಯಲ್ಲಿ ಕೊಟ್ಟಿಗೆ ಕುಸಿದಿದೆ. ಜೋಯಿಡಾದ ಅಣಶಿಘಟ್ಟದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಕಾರವಾರ-ಜೋಯಿಡಾ-ಬೆಳಗಾವಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಭಾರೀ ಮಳೆಯ ಕಾರಣ ಪಶ್ಚಿಮ ಘಟ್ಟಗಳ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಘಾಟ್ ರೋಡ್‌ಗಳಲ್ಲಿ ಗುಡ್ಡ ಕುಸಿತ ಮುಂದುವರೆದಿದ್ದು, ಆತಂಕ ಎದುರಾಗಿದೆ. ಆಗುಂಬೆ ಘಾಟ್ ರೋಡಲ್ಲಿ ಕುಸಿದ ಮಣ್ಣಿನ ತೆರವು ಕಾರ್ಯ ಮುಂದುವರೆದಿದೆ. ಕುಸಿದಿರುವ ಜಾಗವನ್ನು ಭದ್ರ ಮಾಡಲಾಗುತ್ತಿದೆ. ಮಂಗಳವಾರದಿಂದ ಲಘು ವಾಹನ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ.
ಅಳಗಳಲೆಯಲ್ಲಿ ಗುಡ್ಡ ಕುಸಿದು, ನಾಲ್ಕೈದು ಎಕರೆ ತೊಟ ನಾಶವಾಗಿದೆ. ಶಿರಾಡಿ ಘಾಟ್‌ನ ದೋಣಿಗಲ್ ಬಳಿ ಹಾನಿಯಾಗಿರುವ ರಸ್ತೆಯ ದುರಸ್ತಿ ಕಾರ್ಯ ಭರದಿಂದ ನಡೆದಿದೆ. ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೇ ಕಾರಣಕ್ಕೂ ಘಾಟ್ ಬಂದ್ ಮಾಡಲ್ಲ ಎಂದಿದ್ದಾರೆ.
ಕಾವೇರಿ ಉಕ್ಕಿ ಹರಿಯುತ್ತಿರುವುದರಿಂದ ಹಾಸನ-ಕೋಣನೂರು ರಸ್ತೆ ಸಂಚಾರ ಬಂದ್ ಆಗಿದೆ. ಚಿಕ್ಕಮಗಳೂರಿನ ಮಣಬೂರಿನಲ್ಲಿ ಹಗ್ಗದ ನೆರವಿನಿಂದ ಗ್ರಾಮಸ್ಥರು ಓಡಾಡುವ ಸ್ಥಿತಿ ಏರ್ಪಟ್ಟಿದೆ. ಕಸ್ಕೆ ಗ್ರಾಮದ ಬಳಿ ಜಲಸ್ಫೋಟಕ್ಕೆ ಎರಡು ಎಕರೆಯಷ್ಟು ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಅರೆನೂರು ಬಳಿಯೂ ಒಂದು ಎಕರೆ ಕಾಫಿ ಮತ್ತು ಅಡಿಕೆ ತೋಟ ನಾಶವಾಗಿದೆ. ಮನೆ ಬಳಿಯೇ ಬೃಹತ್ ಬಂಡೆ, ಮರ ಬಂದು ಬಿದ್ದಿವೆ.
ಕಳಸ ಬಳಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಬೃಹತ್ ತಡೆಗೋಡೆ ಕುಸಿದಿದ್ದು, ಹೊರನಾಡು ಸಂಪರ್ಕ ಸಂಪೂರ್ಣವಾಗಿ ಬಂದ್ ಆಗುವ ಭೀತಿ ಎದುರಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಕಲ್ಲುಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದ್ದು, ಅದರಲ್ಲಿ ಜನ ಓಡಾಡುತ್ತಿದ್ದಾರೆ.
ಕರಿಕೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿದೆ. ಕುಶಾಲನಗರದ ಸಾಯಿ ಬಡಾವಣೆ ಯಾವುದೇ ಕ್ಷಣದಲ್ಲಿ ಮುಳುಗಡೆ ಆಗಲಿದೆ. ಜನ ಮನೆ ತೊರೆದು ಕಾಳಜಿ ಕೇಂದ್ರ ಸೇರಿದ್ದಾರೆ. ಈಗಾಗಲೇ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಕಳಸದ ತನುಡಿ, ಬೇಲೂರಿನ ಮಾಳೆಗೆರೆ ಹೊಸಕೊಪ್ಪಲು ಸೇರಿ ಹಲವೆಡೆ ಮನೆ ಕುಸಿದಿವೆ. ಬೇಲೂರಿನ ಕೋಗಿಲು ಮನೆ ಬಳಿ ಗುಂಡಿ ಬಿದ್ದ ರಸ್ತೆ ಸರಿಪಡಿಸಿ ಎಂದು ಮಳೆಯಲ್ಲೇ ಜನ ಪ್ರತಿಭಟನೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಶಿವಮೊಗ್ಗದ ಚೋರಡಿ ಬಳಿ ಕುಮುದ್ವತಿ ಪಾಲಾಗಿದ್ದ ವೃದ್ಧೆ ನಾಗರತ್ನ ಶವ ಇಂದು ಪತ್ತೆಯಾಗಿದೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ
ಭಾನುವಾರ ರಾಜ್ಯದ 10 ಕಡೆ ಭಾರೀ ಮಳೆ ಸುರಿದಿದೆ. ಸುಬ್ರಹ್ಮಣ್ಯದಲ್ಲಿ 21 ಸೆಂ.ಮೀ, ಮುಲ್ಕಿಯಲ್ಲಿ 20 ಸೆಂ.ಮೀ, ಕ್ಯಾಸಲ್ ರಾಕ್‌ನಲ್ಲಿ 19 ಸೆಂ.ಮೀ, ಮೂಡಬಿದ್ರೆ ಮತ್ತು ಬೆಳ್ತಂಗಡಿಯಲ್ಲಿ 18 ಸೆ.ಮೀ, ಧರ್ಮಸ್ಥಳದಲ್ಲಿ 15 ಸೆಂ.ಮೀ ಮಳೆ ಸುರಿದಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ 3 ದಿನ ಆರೆಂಜ್ ಅಲರ್ಟ್, ಉತ್ತರ ಒಳನಾಡಿನಲ್ಲಿ 4 ದಿನ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ಶಾಲೆಗಳು ತೆರೆಯಲಿವೆ.