ಕಳೆದ ಬಾರಿಯಂತೆ ಈ ಸಲವೂ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತಕ್ಕೆ ಆಸ್ಕರ್ (Oscar Award) ಒಲಿಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ‘ಟು ಕಿಲ್ ಎ ಟೈಗರ್’ (To Kill a Tiger) ಸಾಕ್ಷ್ಯ ಚಿತ್ರವನ್ನು ತಮ್ಮದೇ ಸಿನಿಮಾ ಎನ್ನುವಂತೆ ಪ್ರಿಯಾಂಕಾ ಚೋಪ್ರಾ ಆಸ್ಕರ್ ಸದಸ್ಯರಿಗೆ ತೋರಿಸಿದ್ದರು. ಪ್ರಚಾರ ಕೂಡ ಮಾಡಿದ್ದರು. ಆದರೆ, ಈ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ ದೊರೆತಿಲ್ಲ. ಈ ಪ್ರಶಸ್ತಿಯು 20 ಡೇಸ್ ಇನ್ ಮರಿಯುಪೋಲ್ ಹೆಸರಿನ ಡಾಕ್ಯುಮೆಂಟರಿಗೆ ಸಂದಿದೆ.
ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯಂತ ಕುತೂಹಲ ಮೂಡಿಸಿದ್ದ ನಾಮ ನಿರ್ದೇಶನ ಪಟ್ಟಿಯಲ್ಲಿ ಯಾರೆಲ್ಲ ಪ್ರಶಸ್ತಿ ಪಡೆಯಲಿದ್ದಾರೆ ಎನ್ನುವ ಸಹಜ ನಿರೀಕ್ಷೆ ಇದ್ದೇ ಇತ್ತು.
ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯು ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಡೆದುಕೊಂಡರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಚಿತ್ರ ಪ್ರಶಸ್ತಿಯು ಓಪನ್ ಹೈಮರ್ ಚಿತ್ರ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.