-ಅಂಗಡಿ ಕಳೆದುಕೊಂಡು ಕಣ್ಣೀರಿಟ್ಟ ಅಂಗವಿಕಲ
ಬೆಂಗಳೂರು: ಅಂಗವೈಫಲ್ಯದ ಕಾರಣಕ್ಕೆ ಎಷ್ಟೋ ಮಂದಿ ಭಿಕ್ಷೆಬೇಡಿ ಜೀವನ ನಡೆಸುತ್ತಾರೆ. ಅಂತಹ ಜನರ ನಡುವೆ ತಮ್ಮ ಅಂಗವಿಕಲತೆಯನ್ನು ಲೆಕ್ಕಿಸದೆ ಸ್ವಾಭಿಮಾನದಿಂದ ದುಡಿದು ಬದುಕುವ ಮಂದಿ ಕೂಡ ಇದ್ದಾರೆ. ಹೀಗೆ ಸ್ವಾಭಿಮಾನದಿಂದ ಅಂಗಡಿ ನಡೆಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಸಾಲ ನೀಡಲು ನಿರಾಕರಿಸಿದ್ದಕ್ಕೆ ಅವರ ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟು ಸುಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಚಿನ್ನಸ್ವಾಮಿ ಅವರು ಚಾಮರಾಜಪೇಟೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತಂದೆ-ತಾಯಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಆದರೆ ಇವರ ಅಂಗಡಿಗೆ ಬರುತ್ತಿದ್ದ ಕೆಲ ಸ್ಥಳೀಯ ಪುಡಾರಿಗಳು ಹಣ ನೀಡದೆ ಸಾಲದಲ್ಲಿ ಟೀ-ಸಿಗರೇಟು ಖರೀದಿಸುತ್ತಿದ್ದರು. ಹೀಗೆ ಸಾಲದ ಪಟ್ಟಿ ಹೆಚ್ಚಾಗಿದಕ್ಕೆ ಚಿನ್ನಸ್ವಾಮಿ ಅವರ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಆದ್ದರಿಂದ ಅವರು ಸಾಲ ಕೊಡಲ್ಲ, ಹಣ ಕೊಟ್ಟು ವ್ಯಪಾರ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಮಾನವೀಯತೆ ಮರೆತು ಚಿನ್ನಸ್ವಾಮಿಯವರ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ.
Advertisement
Advertisement
ಕಿಡಿಗೇಡಿಗಳು ರಾತ್ರೋರಾತ್ರಿ ಚಿನ್ನಸ್ವಾಮಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಂಡಿದ್ದಾರೆ. ಇದರಿಂದ ಜೀವನಕ್ಕೆ ಆಧಾರವಾಗಿದ್ದ ಒಂದು ಅಂಗಡಿಯನ್ನು ಕಳೆದುಕೊಂಡು ಚಿನ್ನಸ್ವಾಮಿ ಹಾಗೂ ಅವರ ವೃದ್ಧ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.
Advertisement
ದುರುಳರ ವಿಕೃತತನಕ್ಕೆ ಚಿನ್ನಸ್ವಾಮಿ ಅವರ ಪೆಟ್ಟಿಗೆ ಅಂಗಡಿ ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿಯುರಿದಿದೆ. ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿದಷ್ಟೇ ಅಲ್ಲದೆ, ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಲಾಂಗು-ಮಚ್ಚುಗಳಿಂದ ಹಾನಿ ಮಾಡಿ ದುಷ್ಟತನ ಮೆರೆದಿದ್ದಾರೆ.
Advertisement
ಅಂಗಡಿಗೆ ಬೆಂಕಿ ಹಂಚಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಸುಟ್ಟುಹೋಗುತ್ತಿದ್ದ ಅಂಗಡಿಯ ಬೆಂಕಿಯನ್ನು ಪೊಲೀಸರು ಸ್ಥಳೀಯರ ಸಹಾಯ ಪಡೆದು ನಂದಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.