ಬೀಜಿಂಗ್: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಅತ್ತ ತಂದೆ ಆಸ್ಪತ್ರೆ ಸೇರಿದ್ದರೆ, ಇತ್ತ ವಿಶೇಷಚೇತನ ಮಗನನ್ನು ನೋಡಿಕೊಳ್ಳಲು ಯಾರು ಇಲ್ಲದೆ ಆತ ಹಸಿವಿನಿಂದ ಕೂತಲ್ಲಿಯೇ ಸಾವನ್ನಪ್ಪಿರುವ ಕರುಣಾಜನಕ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ.
ಹುಬೇಯಲ್ಲಿನ ವಿಶೇಷಚೇತನ ಮಗ ಯಾನ್ ಚೆಂಗ್(17) ಜೊತೆಗೆ ವಾಸವಾಗಿದ್ದ ಯಾನ್ ಕ್ಸಿಯೋವೆನ್ ಜ್ವರದಿಂದ ಬಳಲುತ್ತಿದ್ದರು. ಜ. 22ರಂದು ಆಸ್ಪತ್ರಗೆ ಹೋಗಿದ್ದ ವೇಳೆ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಹೀಗಾಗಿ ಜ. 22ರಿಂದ ಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾನ್ ಚೆಂಗ್‍ಗೆ ಮಾತನಾಡಲು, ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹುಟ್ಟುವಾಗಲೇ ಕಿವುಡನಾಗಿದ್ದ ಆತ ಏನೇ ಕೆಲಸ ಮಾಡಬೇಕಾದರು ಅಪ್ಪನ ಮೇಲೆ ಅವಲಂಬಿತನಾಗಿದ್ದ. ವೀಲ್‍ಚೇರ್ ಮೇಲೆಯೇ ಇರುತ್ತಿದ್ದ ಚೆಂಗ್ ತಾಯಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಂದೆಯೇ ಚೆಂಗ್‍ನ ಎಲ್ಲ ಕೆಲಸಗಳನ್ನೂ ನೋಡಿಕೊಳ್ಳುತ್ತಿದ್ದರು. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆಸ್ಪತ್ರೆಗೆ ಹೋಗಿ ಬರೋಣ ಎಂದು ತಂದೆ ಚೆಂಗ್‍ನನ್ನು ರೂಮಿನಲ್ಲಿ ವೀಲ್‍ಚೇರ್ ಮೇಲೆ ಕೂರಿಸಿ ಹೋಗಿದ್ದರು. ಜ. 22ರಂದು ಆಸ್ಪತ್ರೆಗೆ ಹೋಗಿದ್ದ ತಂದೆ ವಾಪಸ್ ಮನೆ ಕಡೆ ಬರಲಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಅವರನ್ನು ದಾಖಲಿಸಿಕೊಳ್ಳಲಾಯ್ತು.
ಇತ್ತ ಮಗನಿಗೆ ಊಟ ಹಾಕಲು, ಆತನ ದಿನನಿತ್ಯದ ಕೆಲಸಗಳನ್ನು ಮಾಡಲು ಯಾರೂ ಇಲ್ಲದೆ, ಮನೆಯೊಳಗೆ ಒಬ್ಬನೇ ಇದ್ದನು. ಮಗನ ಚಿಂತೆಯಲ್ಲಿದ್ದ ತಂದೆ ಆಸ್ಪತ್ರೆಯಿಂದಲೇ ಮಗನನ್ನು ಯಾರಾದರೂ ನೋಡಿಕೊಳ್ಳಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಮಗನ ಪರಿಸ್ಥಿತಿಯನ್ನೂ ವಿವರಿಸಿ, ಸಹಾಯ ಕೋರಿ ಮನವಿ ಮಾಡಿಸಿದ್ದರು.
ವೈದ್ಯರು, ಸಂಬಂಧಿಕರು, ಸ್ನೇಹಿತರೆಲ್ಲರ ಬಳಿ ತಮ್ಮ ಮಗನನ್ನು ನೋಡಿಕೊಳ್ಳುವಂತೆ ಯಾನ್ ವಿನಂತಿ ಮಾಡಿದ್ದರು. ಆದರೆ, ಯಾರೂ ಅವರ ಸಹಾಯಕ್ಕೆ ಬರಲೇ ಇಲ್ಲ. ತನ್ನ ಜೊತೆ ಯಾರೂ ಇಲ್ಲದೆ, ಹಸಿವಿನಿಂದ ಬಳಲುತ್ತಿದ್ದ ಚೆಂಗ್ ತಂದೆಗಾಗಿ ಮನೆಯಲ್ಲಿ ಕಾಯುತ್ತಿದ್ದ. ದುರಾದೃಷ್ಟವಶಾತ್ ಹಸಿವಿನಿಂದ ಬಳಲಿ ಜ. 29ರಂದು ವೀಲ್‍ಚೇರ್ ನಲ್ಲಿಯೇ ಚೆಂಗ್ ತನ್ನ ಪ್ರಾಣ ಬಿಟ್ಟಿದ್ದಾನೆ.
ಈ ದುರಂತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ನೆಟ್ಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಇಂತಹ ಘಟನೆಗಳು ಮತ್ತೆ ನಡೆಯಬಾರದು. ಕೊರೊನಾ ವೈರಸ್ ಸೋಂಕು ಪೀಡಿತರ ಕುಟುಂಬದ ಬಗ್ಗೆ ನಿಗಾ ವಹಿಸಿ ಎಂದು ಚೀನಾ ಸರ್ಕಾರ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ ಎನ್ನಲಾಗಿದೆ.