ರಾಜಕೀಯ ಕಾರಣಕ್ಕಾಗಿ ತಮಿಳಿನ ಹೆಸರಾಂತ ನಟ ದಳಪತಿ ವಿಜಯ್ (Dalpati Vijay) ಶೀಘ್ರದಲ್ಲೇ ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಕೈಯಲ್ಲಿರೋ ಪ್ರಾಜೆಕ್ಟ್ ಮುಗಿದ ತಕ್ಷಣವೇ ಅವರು ರಾಜಕಾರಣದಲ್ಲಿ ಸಕ್ರೀಯರಾಗಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ.
ವಿಜಯ್ ಒಪ್ಪಿಕೊಂಡಂತೆ ಅವರ 69ನೇ ಸಿನಿಮಾವೇ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ವೆಟ್ರಿ ಮಾರನ್ (Vetrimaran) ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಣೆಯೂ ಆಗಿದೆ. ಆದರೆ, ಈ ವಿಚಾರದಲ್ಲಿ ವೆಟ್ರಿ ಮಾರನ್ ಶಾಕಿಂಗ್ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ. ಈ ಮಾತು ವಿಜಯ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ವೆಟ್ರಿಮಾರನ್ ಮತ್ತು ವಿಜಯ್ ಕಾಂಬಿನೇಷನ್ (Combination) ಚಿತ್ರವೆಂದರೆ ಕಾಯುವಿಕೆ ಸಹಜ. ಮತ್ತೊಂದು ಅದ್ಭುತ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದೇ ಅಭಿಮಾನಿಗಳ ಆಸೆ ಆಗಿತ್ತು. ಆದರೆ, ಈ ಸಿನಿಮಾ ತೆರೆ ಕಾಣೋದು ಅನುಮಾನ ಎಂದು ವೆಟ್ರಿ ಹೇಳಿಕೊಂಡಿದ್ದಾರೆ. ಈ ಮಾತು ಅಭಿಮಾನಿಗಳಲ್ಲಿ ನಿರಾಸೆ ತಂದಿದ್ದು ಸುಳ್ಳಲ್ಲ. ಯಾಕೆ ಅವರು ಹಾಗೆ ಹೇಳಿದರು ಎನ್ನುವುದನ್ನು ಮುಂದಿನ ದಿನಗಳಲ್ಲಿ ಅವರೇ ಸ್ಪಷ್ಟನೆ ನೀಡಬಹುದು.
ವಿಜಯ್ 69ನೇ ಚಿತ್ರಕ್ಕೆ ಸಮಂತಾ (Samantha) ನಾಯಕಿಯಾಗಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣದ ಹೊಣೆ ಹೊತ್ತಿದೆ ಎನ್ನುವ ಸುದ್ದಿಯೂ ಇತ್ತು. ಆದರೆ, ಸಿನಿಮಾನೇ ಬರೋದಿಲ್ಲ ಎನ್ನುವ ಸುದ್ದಿ ಆಘಾತ ಮೂಡಿಸಿದೆ.