ಸಿನಿಮಾಗಳು ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಹೀರೋಗಳ ಕಟೌಟ್ ಕೆಲವೊಮ್ಮೆ ನಾಯಕಿಯ ಕಟೌಟ್ ನಿಲ್ಲಿಸಿ ಅದಕ್ಕೆ ಸ್ಟಾರ್ ಕಟ್ಟಿ, ಹಾರ ಹಾಕೋದು ವಾಡಿಕೆ. ಆದರೆ ಉದ್ಘರ್ಷ ಸಿನಿಮಾ ಬಿಡುಗಡೆಯಾಗಿರುವ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ಮುಂದೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಕಟೌಟ್ ನಿಲ್ಲಿಸಿದ್ದಾರೆ.
ಒಂದು ಕಡೆ ಯಜಮಾನ ದರ್ಶನ್, ಈ ಕಡೆ ಕೆಜಿಎಫ್ ಯಶ್ ನಡುವೆ ದೇಸಾಯಿಯವರ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇವತ್ತಿನ ಘಟಾನುಘಟಿ ನಟರೆಲ್ಲಾ ಪಾತ್ರವಹಿಸಿದ್ದಾರೆ. ಆದರೂ ಅವರ ಕೈ ಕಾಲುಗಳನ್ನು ಬಿಟ್ಟು ಪೋಸ್ಟರ್ ಗಳಲ್ಲಿ ಮುಖವನ್ನೂ ಹಾಕಿಲ್ಲ.
ಇದು ದೇಸಾಯಿ ಸ್ಟೈಲ್. ಈಗ ಥೇಟರ್ ಮುಂದೆ ನಿರ್ದೇಶಕರ ಕಟೌಟ್ ನಿಂತಿದೆ. ನಿಜ ದೇಸಾಯಿ ಸ್ಟಾರ್ ಗಳನ್ನು ಹುಟ್ಟುಹಾಕಿದ ಡೈರೆಕ್ಟರ್. ಒಂದು ಕಾಲಕ್ಕೆ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದವರು. ಉದ್ಘರ್ಷ ಮೂಲಕ ಮತ್ತೆ ಅವರು ಹಳೇ ಛಾರ್ಮಿಗೆ ಮರಳುವಂತಾಗಬೇಕಿದೆ. ಆಗ ಥಿಯೇಟರ್ ಮುಂದೆ ನಿಂತ ಕಟೌಟಿಗೂ ಬೆಲೆ ಬರುತ್ತದೆ. ಅಲ್ಲವೆ?