ಸಿಂಪಲ್ ಸುನಿ (Simple Suni) ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ (Vinay Rajkumar) ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಒಂದು ಸರಳ ಪ್ರೇಮಕಥೆ’. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ (Swathistha Krishnan), ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.
ನಟ ವಿನಯ್ ರಾಜ್ ಕುಮಾರ್ ಮಾತನಾಡಿ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಈ ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸನೂನ್
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಗೆ ಇಟ್ಟ ಮೊದಲ ಟೈಟಲ್ ‘ಒಂದು ಸರಳ ಪ್ರೇಮಕಥೆ’. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಒಕೆ ಮಾಡಿದ್ರು, ಚಿತ್ರಕ್ಕೆ ಎಂ.ಎಲ್. ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇವತ್ತು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿದ್ದು, ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.