ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ 2017ರಲ್ಲಿ ಸೂಪರ್ ಡೂಪರ್ ಹಿಟ್ `ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿಯನ್ನು ಮೊದಲ ಬಾರಿ ನೋಡಿದ ದಿನವನ್ನು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಬರೆದುಕೊಂಡಿರೋ ರಿಷಬ್ ಅವರು, ಅಂದು ಕೈ ಕುಲುಕಿ ಹೋದವಳನ್ನೇ ಕೈ ಹಿಡಿಯೋ ಭಾಗ್ಯ ನನ್ನದಾಯ್ತು ಅಂತ ಆ ದಿನವನ್ನು ಮೆಲುಕು ಹಾಕಿದ್ದಾರೆ.
ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದೇನು?: `ಅದು ರಿಕ್ಕಿ ಸಿನಿಮಾದ ಪ್ರೀಮಿಯರ್ ಶೋ. ಚಿತ್ರ ವೀಕ್ಷಿಸಿ ಹೊರಗೆ ಬಂದವರೆಲ್ಲಾ ಚಿತ್ರವನ್ನು ಎಂಜಾಯ್ ಮಾಡಿದ್ದರೆಂದು ಅವರ ಪ್ರಸನ್ನ ವದನಗಳಿಂದ ತಿಳಿಯುತ್ತಿತ್ತು. ಒಂದೆಡೆ ಹೀರೋ-ಹೀರೋಯಿನ್ನಿನ ಸೆಲ್ಫೀ ಸೆಷನ್ ನೆಡೆಯುತ್ತಿತ್ತು. ನನಗೆ ಪರಿಚಯವಿದ್ದ ಕೆಲವರು ಕಾರ್ನರಿನಲ್ಲಿ ನಿಂತಿದ್ದ ನನ್ನನ್ನು ಗುರುತಿಸಿ ಕೈ ಕುಲುಕಿ ಹೋಗುತ್ತಿದ್ದರು. ಮುಜುಗರದಿಂದ ಅತ್ತಿತ್ತ ನೋಡುತ್ತಾ ನಿಂತಿದ್ದ ನನ್ನ ಬಳಿಗೆ ನನ್ನಷ್ಟೇ ನಾಚುತ್ತಾ ಬಂದ ಹುಡುಗಿಯೊಬ್ಬಳು ನಕ್ಕು ಮಾತನಾಡಿಸಿ ಫೋಟೋ ತೆಗೆದುಕೊಂಡು ಕೊನೆಯಲ್ಲಿ `ಸಿನಿಮಾ ಬಹಳ ಚೆನ್ನಾಗಿದೆ.. ಹಿಟ್ ಆಗಲಿ.. ಆಲ್ ದ ಬೆಸ್ಟ್’ ಎಂದು ಕೈ ಕುಲುಕಿ ಹೋಗಿದ್ದಳು.
ರಿಕ್ಕಿಯಿಂದಲೋ, ಲಕ್ಕಿನಿಂದಲೋ ಅಂದು ಕೈಕುಲುಕಿ ಹೋದವಳನ್ನೇ ಕೈ ಹಿಡಿಯುವ ಭಾಗ್ಯ ನನ್ನದಾಯ್ತು. ಎರಡು ವರ್ಷದ ಹಿಂದೆ ನಿನ್ನನ್ನು ಮೊದಲ ಬಾರಿ ಭೇಟಿ ಮಾಡಿದ ಆ ದಿನವನ್ನು ನೆನೆಯುತ್ತಾ… ಅಂತ ಹೇಳಿ ತನ್ನ ಧರ್ಮ ಪತ್ನಿಗೆ ಫೇಸ್ಬುಕ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಿರ್ದೇಶಕ, ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9ರಂದು ಪ್ರಗತಿ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರ ಮದುವೆ ಕುಂದಾಪುರದ ಕೋಟೇಶ್ವರದ ಅಂಕದ ಕಟ್ಟೆಯಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದಿದ್ದು, ಸ್ಯಾಂಡಲ್ ವುಡ್ ಕಲಾವಿದರು ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು.
ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆ ಮೂಲದವರಾದ ಪ್ರಗತಿಯವರು ಸಹ್ಯಾದ್ರಿ ಕಾಲೇಜ್‍ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸೋದರಿ ಪ್ರತಿಭಾ ತನ್ನ ಸಹೋದ್ಯೋಗಿಯಾಗಿದ್ದ ಪ್ರಗತಿಯನ್ನು ರಿಷಬ್‍ಗೆ ಪರಿಚಯಿಸಿದರು. ಇದಾದ ಬಳಿಕ ಮನೆಯ ಹಿರಿಯರೆಲ್ಲಾ ಕೂತು ಮದುವೆ ನಿಶ್ಚಯಿಸಿದ್ದರು.