ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ (Raghavendra Hegde) ಹಾಗೂ ಧ್ರುವ ಸರ್ಜಾ (Dhruva Sarja) ಸಿನಿಮಾ ಮಾಡುವ ವಿಚಾರ ವಿವಾದಕ್ಕೆ ತಿರುಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ನಡೆದ ಒಪ್ಪಂದದ ಪ್ರಕಾರ ಸಿನಿಮಾ ಇಲ್ಲಿಯವರೆಗೂ ಮಾಡುವುದಕ್ಕೆ ಆಗಿಲ್ಲ. ಒಪ್ಪಂದಕ್ಕೆ ಸಹಿಹಾಕುವ ಮೊದಲೇ ಅಡ್ವಾನ್ಸ್ ರೂಪದಲ್ಲಿ ನಟ ಧ್ರುವ ಸರ್ಜಾ ಹಣ ಪಡೆದಿದ್ದಾರೆ. ಆದ್ರೆ ಸಿನಿಮಾ ಮಾಡೋಕೆ ದಿನಗಳನ್ನ ಮುಂದೂಡುತ್ತಲೇ ಇದ್ದಾರೆ ಎಂದು ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಮುಂಬೈನ (Mumbai) ಆಂಬೋಳಿ (Amboli) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧ್ರುವ ಸರ್ಜಾ ವಿರುದ್ಧ ಪ್ರಕರಣ ದಾಖಲಾದ ಬಳಿಕ ಧ್ರುವ ಸರ್ಜಾ ಆಪ್ತ ಬಳಗದಿಂದ ಸ್ಪಷ್ಟನೆ ಸಿಕ್ಕಿತ್ತು. ಅಲ್ಲದೇ ಕನ್ನಡಕ್ಕೆ ನಿರ್ದೇಶಕರು ಆದ್ಯತೆ ನೀಡದೇ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ಕೇಳಿಕೊಂಡಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಒಪ್ಪದೇ ಇದ್ದಾಗ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು ಎಂದು ಧ್ರುವ ಆಪ್ತಬಳಗದಿಂದ ಸ್ಪಷ್ಟನೆ ಬಂದಿತ್ತು. ರಾಘವೇಂದ್ರ ಹೆಗಡೆಯವರನ್ನ ಕನ್ನಡ ವಿರೋಧಿ ಅಂತ ಬಿಂಬಿಸಿದ್ದಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಬಳಗದ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ ಜಗ್ಗುದಾದಾ ಡೈರೆಕ್ಟರ್ ರಾಘವೇಂದ್ರ ಹೆಗಡೆ. ‘ನಾನು ಕನ್ನಡದಲ್ಲೇ ಜಗ್ಗುದಾದಾ ಸಿನಿಮಾ, ಶನಿ ಸೀರಿಯಲ್, ಮಹಾಕಾಳಿ ಸೀರಿಯಲ್ ಮಾಡಿದ್ದೆ. 2ನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತ ಕೇಳಿಕೊಂಡಿದ್ರು, ಆಯ್ತು ಅಂತ 8 ವರ್ಷ ಕಾದೆ. ಒಂದು ಬಾರಿ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ಸಮ್ಮುಖದಲ್ಲಿ ಕನ್ನಡ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದೆ. ಅವರು ಪ್ಯಾನ್ ಇಂಡಿಯಾ ಮಾಡ್ತಿದ್ದಿವಿ, ಕೆಲವು ದಿನ ಕಳೆದ ನಂತರ ಮಾಡಿ ಅಂದ್ರು. ಕಾನೂನು ಪ್ರಕಾರ ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದ್ದೆ, ನಂತರ ನಾನು ನೋಟೀಸ್ ಕಳಿಸಿದೆ. ನಾನು ತಮಿಲಕು ಅತಯವಾ ತೆಲುಗು ಸಿನಿಮಾ ಮಾಡುವುದಾಗಿದ್ದರೆ ತಮಿಳು ಅಥವಾ ತೆಲುಗು ನಟರಿಗೆ ಸಿನಿಮಾ ಮಾಡ್ತಿದ್ದೆ’ ಎಂದು ಹೇಳಿದ್ದಾರೆ. ನಾನು ಕರಾವಳಿಯವನು ನನ್ನ ಮಾತೃ ಭಾಷೆ ಕನ್ನಡ ಎಂದು ತಿರುಗೇಟು ನೀಡಿದ್ದಾರೆ.