ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್ ಯೂ ಜೂನ್ 14ರಂದು ತೆರೆ ಕಾಣುತ್ತಿದೆ. ಯಾವುದೇ ಚಿತ್ರಗಳನ್ನು ಮಾಡುವಾಗಲೂ ಅಚ್ಚುಕಟ್ಟಾದ ಪೂರ್ವ ತಯಾರಿ, ಒಂದೇ ಒಂದು ತೊಡಕೂ ಸಂಭವಿಸದಂತೆ ಮುಂದಡಿಯಿಡೋ ಎಚ್ಚರ ಮತ್ತು ಕಥೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋ ಕಲಾವಂತಿಕೆ ಚಂದ್ರು ಅವರ ಟ್ರೇಡ್ ಮಾರ್ಕುಗಳಿದ್ದಂತೆ. ಬಿಡುಗಡೆಯ ಪೂರ್ವದಲ್ಲಿಯೇ ಐ ಲವ್ ಯೂ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿರೋದರ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ!
Advertisement
ಆರ್. ಚಂದ್ರು ವರ್ಷಕ್ಕೊಂದು ಅಚ್ಚುಕಟ್ಟಾದ ಚಿತ್ರ ಮಾಡೋ ಪರಿಪಾಠವನ್ನು ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೆಂಬ ನಾಡಿಮಿಡಿತವನ್ನು ಅರ್ಥೈಸಿಕೊಂಡಿರೋ ಅವರು ಕಾಡುವಂಥಾ ಕಥೆಗೊಂದು ಅಂತಿಮ ಸ್ಪರ್ಶ ನೀಡಿಯಾದ ಮೇಲಷ್ಟೇ ಹೀರೋ, ನಾಯಕಿ, ತಾರಾಗಣ ಮುಂತಾದವುಗಳ ಬಗ್ಗೆ ಗಮನ ಹರಿಸುತ್ತಾರೆ. ಹೀಗೆಯೇ ನಿರ್ದೇಶಕರಾಗಿ ಸಾಗಿ ಬಂದಿರೋ ಚಂದ್ರು ಅವರ ಪಾಲಿಗೇ ಐ ಲವ್ ಯೂ ಚಿತ್ರ ಸ್ಪೆಷಲ್ ಅನ್ನಿಸಲು ಹಲವಾರು ಕಾರಣಗಳಿವೆ.
Advertisement
Advertisement
ಈ ಚಿತ್ರದ ವಿಚಾರದಲ್ಲಿ ನಿರ್ದೇಶಕನಾಗಿ, ನಿರ್ಮಾಪಕರಾಗಿಯೂ ಚಂದ್ರು ಜವಾಬ್ದಾರಿ ಹೊತ್ತುಕೊಂಡಿರೋದು ಗೊತ್ತೇ ಇದೆ. ಹೀಗೆ ಎರಡೆರಡು ಭಾರವಿದ್ದರೂ ಕೂಡಾ ಈ ಸಿನಿಮಾವನ್ನು ಅವರು ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರೂಪಿಸಿರೋದೊಂದು ಸಾಹಸ. ಚಂದ್ರು ಈ ಹಿಂದೆಯೂ ತೆಲುಗಿನಲ್ಲೊಂದು ಚಿತ್ರವನ್ನ ನಿರ್ದೇಶನ ಮಾಡಿದ್ದರು. ಆದ್ದರಿಂದಲೇ ಅವರಲ್ಲಿನ ಪ್ರೇಕ್ಷಕ ವರ್ಗಕ್ಕೆ ಚಿರಪರಿಚಿತರು. ಉಪೇಂದ್ರ ಕೂಡಾ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ದಿಸೆಯಲ್ಲಿ ಐ ಲವ್ ಯೂ ಚಿತ್ರವನ್ನು ತೆಲುಗಿನಲ್ಲಿಯೂ ರೂಪಿಸುವ ನಿರ್ಧಾರಕ್ಕೆ ಬಂದು ಚಂದ್ರು ಅದರಲ್ಲಿಯೂ ಯಶ ಕಂಡಿದ್ದಾರೆ.
Advertisement
ಈ ಚಿತ್ರದ ವಿಶೇಷತೆ ಏನು ಎಂಬ ಪ್ರಶ್ನೆ ಎದುರಾದರೆ ಚಂದ್ರು ಅವರು ಥಟ್ಟನೆ ಗಟ್ಟಿಯಾದ ಕಥೆ ಮತ್ತು ಯಾವ ಆಲೋಚನೆಗಳ ನಿಲುಕಿಗೂ ಸಿಗದ ಗಟ್ಟಿಯಾದ ಕಥೆ ಅನ್ನುತ್ತಾರೆ. ಅವರ ಈ ಹಿಂದಿನ ಚಿತ್ರಗಳ ಜೀವಾಳವೂ ಗಟ್ಟಿ ಕಥೆಯೇ. ಆದರೆ ಐ ಲವ್ ಯೂ ವಿಚಾರದಲ್ಲದು ಮತ್ತಷ್ಟು ಗಟ್ಟಿಯಾಗಿದೆಯಂತೆ. ಐ ಲವ್ ಯೂ ಅಂದರೆ ಪ್ರೇಮದ ಮೊದಲ ಪುಳಕಗಳು ಸಾಲುಗಟ್ಟಿ ನಿಲ್ಲುತ್ತವೆ. ಹಾಗೆಂದ ಮೇಲೆ ಇದೊಂದು ಅದ್ಭುತ ಪ್ರೇಮ ಕಥಾನಕ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಆದರೆ ಅದರಾಚೆಗೂ ಕಥೆಯ ವಿಚಾರಗಳಲ್ಲಿ ಅಚ್ಚರಿಗಳು ಪ್ರೇಕ್ಷಕರಿಗಾಗಿ ಕಾದು ಕೂತಿವೆ. ಅದೇನೆಂಬುದೇ ಪ್ರಧಾನವಾದ ಸರ್ಪ್ರೈಸ್!
ಐ ಲವ್ ಯೂ ಫ್ಯಾಮಿಲಿ ಸಮೇತ ಕೂತು ನೋಡಿ ಎಂಜಾಯ್ ಮಾಡುವಂಥಾ ಸಿನಿಮಾ ಮಾತ್ರವಲ್ಲ; ಫ್ಯಾಮಿಲಿ ಸಮೇತ ನೋಡಲೇ ಬೇಕಾದ ಚಿತ್ರ ಅನ್ನೋದು ಚಂದ್ರು ಅವರ ಭರವಸೆ. ಯಾಕೆಂದರೆ ಪ್ರೀತಿ ಪ್ರೇಮಗಳಾಚೆಗೂ ಇಲ್ಲಿ ಮೌಲ್ಯಯುತವಾದೊಂದು ಸಂದೇಶವಿದೆ. ಕ್ಲೈಮ್ಯಾಕ್ಸಿನಲ್ಲಿಯೂ ವಿಶೇಷತೆಗಳಿವೆ. ಇದೆಲ್ಲವೂ ಇದೇ ಜೂನ್ 14ರಂದು ಸ್ಪಷ್ಟವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.