ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಇಂದು ಡಿಸಿಪಿ ರವಿ ಚನ್ನಣ್ಣನವರ್ ಅವರ ಕಚೇರಿಗೆ ಹೋಗಿ ದೂರು ಸಲ್ಲಿಸಿದ್ದಾರೆ.
ನಟಿ ರಕ್ಷಿತಾ ಮತ್ತು ಪ್ರೇಮ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಆರೋಪದ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋಗಿ ನಿರ್ದೇಶಕ ಪ್ರೇಮ್ ದೂರು ನೀಡಿದ್ದಾರೆ. ‘ದ ವಿಲನ್’ ಸಿನಿಮಾದ ಬಗ್ಗೆ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವು ಕಿಡಿಗೇಡಿಗಳು ನನ್ನ ಮತ್ತು ನನ್ನ ಕುಟುಂಬದವರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ ಎಂದು ನಿರ್ದೇಶಕ ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಕೊಟ್ಟ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್, ಕೆಲವರು ಅಭಿಮಾನಿಗಳು ಅಂತ ಹೇಳಿಕೊಂಡು ಸಿನಿಮಾ ಹೊರತು ಪಡಿಸಿ, ವೈಯಕ್ತಿಕವಾಗಿ ತುಂಬಾ ಕೆಟ್ಟದಾಗಿ ನನ್ನ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ದೂರು ಕೊಟ್ಟಿದ್ದೇನೆ. ವಿಡಿಯೋದಲ್ಲಿ ತುಂಬಾ ಅಶ್ಲೀಲವಾಗಿ ಮತ್ತು ವಿಕೃತವಾಗಿ ಮಾತನಾಡಿದ್ದಾರೆ. ಅವರು ಮಾತನಾಡಿದ ವಿಡಿಯೋಗಳಿವೆ. ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನ ಹಾಕಿದ್ದೇವೆ. ಸಿನಿಮಾ ಬಗ್ಗೆ ಮಾತನಾಡಲಿ ಆದರೆ ನನ್ನ ಮತ್ತು ಕುಟುಂಬದವರ ಬಗ್ಗೆ ಮಾತನಾಡುವುದು ತಪ್ಪು. ಅಭಿಮಾನಿ ಅಂತ ಹೆಸರು ಹೇಳಿಕೊಂಡು ಈ ರೀತಿಯಾಗಿ ಮಾತನಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ಲೆಜೆಂಡ್ ಶಿವಣ್ಣ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ಹೆಸರನ್ನು ಹಾಳು ಮಾಡುವುದಕ್ಕೆ ಕೆಲವರು ಈ ಪ್ರಯತ್ನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಅಭಿಮಾನಿಗಳು ಅವರನ್ನು ಹಿಂಬಾಲಿಸಿ ಮುಂದೆ ಹೋಗುತ್ತಾರೆ. ಆದರೆ ಕೆಲವರು ಮಾತ್ರ ಈ ರೀತಿಯಾಗಿ ಮಾತನಾಡಿ ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಅವರ ವಿರುದ್ಧ ನಾನು ದೂರು ಕೊಟ್ಟಿದ್ದೇನೆ. ಸುಮಾರು 9 ವಿಡಿಯೋಗಳಿವೆ. ಅವರಲ್ಲಿ ಮೂರು ಜನರನ್ನು ಪತ್ತೆ ಮಾಡಲಾಗಿದೆ. ಇನ್ನುಳಿದರವನ್ನು ಸಂಜೆ ವೇಳೆಗೆ ಕರೆಸಿ ಮಾತನಾಡುತ್ತಾರೆ ಎಂದು ಡಿಸಿಪಿ ರವಿ ಚನ್ನಣ್ಣನವರ್ ಅವರು ತಿಳಿಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಡಿಸಿಪಿ ರವಿ ಚೆನ್ನಣ್ಣನವರ್ ಅವರು ಮಾತನಾಡಿ, ನಮ್ಮ ಕಚೇರಿಗೆ ನಿರ್ದೇಶಕ ಪ್ರೇಮ್ ಬಂದು ದೂರು ಕೊಟ್ಟಿದ್ದಾರೆ. ಇವರು ಕೊಟ್ಟಿರುವ ದೂರಿನಲ್ಲಿ ಇತ್ತೀಚೆಗೆ ‘ದಿ ವಿಲನ್’ ಸಿನಿಮಾ ಮಾಡಿದ್ದೇನೆ. ಆದರೆ ಕೆಲವು ಕಿಡಿಗೇಡಿಗಳು ನಟರಾದ ಶಿವಣ್ಣ ಮತ್ತು ಸುದೀಪ್ ಅವರ ಹೆಸರನ್ನು ಕೆಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುಳ್ಳು ಮತ್ತು ಅವಹೇಳನಕಾರಿ ನಿಂದನೆ ಮಾಡಿದ್ದಾರೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಆಗಿದೆ. ಈ ಮೂಲಕ ಅವರ ಶಾಂತಿ ಹಾಳಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ವಿಡಿಯೋ ಇರುವ ಒಂದು ಪೆನ್ ಡ್ರೈವ್ ಕೊಟ್ಟಿದ್ದಾರೆ. ನಾನು ಚಂದ್ರಲೇಔಟ್ ಇನ್ಸ್ ಪೆಕ್ಟರ್ ಕಲ್ಲಪ್ಪ ಹಾಗೂ ಎಸಿಪಿ ಅವರಿಗೆ ಸೂಕ್ತ ನಿರ್ದೇಶನ ಮಾಡುವಂತೆ ಹೇಳಿದ್ದೇನೆ ಎಂದು ಡಿಸಿಪಿ ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv