ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಗೆ ನಿರ್ದೇಶಕ ಓಂ ರಾವತ್ ಕಿಸ್ ಕೊಟ್ಟ ಪ್ರಕರಣ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಕಿಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಿಮ್ಮಪ್ಪನ ಪ್ರಧಾನ ಅರ್ಚಕರು ಸಿಡಿಮಿಡಿಗೊಂಡಿದ್ದು, ಈ ರೀತಿ ಮಾಡಲು ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ದೇವರ ಸನ್ನಿಧಾನದಲ್ಲಿ ಹೇಗಿರಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲ ಅವರಿಗೆ. ದೇವಸ್ಥಾನಕ್ಕೆ ಬರುವವರು ಈ ರೀತಿ ನಡೆದುಕೊಳ್ಳಬಾರದು. ಈ ಘಟನೆ ಭಕ್ತರಿಗೆ ಅಪಾರ ನೋವನ್ನುಂಟು ಮಾಡಿದೆ. ಸಿನಿಮಾದವರು ಅಂದ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati) ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.