ಮುಂಬೈ: ಮಹಾ ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಭೋಂಸ್ಲೆ (Monalisa Bhosle) ಅವರ ಬಗ್ಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ʻದಿ ಡೈರಿ ಆಫ್ ಮಣಿಪುರʼ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ನೀಡಿದ ದೂರು ಆಧರಿಸಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸನೋಜ್ ಮಿಶ್ರಾ (Sanoj Mishra) ನೀಡಿದ ದೂರು ಆಧರಿಸಿ ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ವೇಳೆ ಮೊನಾಲಿಸಾ ಭೋಂಸ್ಲೆ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಅವರ ಫೋಟೊ ಮತ್ತು ವಿಡಿಯೋಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಟ್ರೆಂಡ್ ಅದ ಬೆನ್ನಲ್ಲೇ ʻದಿ ಡೈರಿ ಆಫ್ ಮಣಿಪುರʼ (The Diary of Manipur) ಸಿನಿಮಾ ನಿರ್ಮಿಸುವುದಾಗಿ ಮಿಶ್ರಾ ಘೋಷಿಸಿದ್ದರು.
ʻಮಿಶ್ರಾ ನಿರ್ದೇಶಿಸಿದ ಯಾವುದೇ ಸಿನಿಮಾಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹಾಗಾಗಿ ಮಿಶ್ರಾ ಅವರು 16 ವರ್ಷದ ಮೊನಾಲಿಸಾ ಅವರ ವೃತ್ತಿಜೀವನವನ್ನು ಹಾಳು ಮಾಡಲು ಮುಂದಾಗಿದ್ದಾರೆʼ ಎಂದು ದೂರಿನಲ್ಲಿ ಹೆಸರಿಸಲಾದ ಐವರು ಆರೋಪಿಸಿದ್ದರು. ಹೀಗಾಗಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನಗೆ ಘನತೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮಿಶ್ರಾ ಪ್ರತಿದೂರು ದಾಖಲಿಸಿದ್ದಾರೆ ಎಂಬುದಾಗಿ ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಶ್ರಾ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.