ಬೆಂಗಳೂರು: ದಂಪತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ ನಿರ್ದೇಶಕ ಸೇರಿ ನಾಲ್ಕು ಮಂದಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ಸಂತೋಷ್, ಪ್ರಶಾಂತ್, ಸುರೇಶ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳು. ದಂಪತಿಯ ಖಾಸಗಿ ಕ್ಷಣಗಳ ವಿಡಿಯೋ ಅಪ್ಲೋಡ್ ಮಾಡುವುದಾಗಿ ಆರೋಪಿಗಳು ಬೆದರಿಕೆ ನೀಡಿ, 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ದೂರುದಾರ ದಂಪತಿ ಜೊತೆ ಆರೋಪಿ ಹೊರ ರಾಜ್ಯಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದ ವೇಳೆ ಪರಸ್ಪರ ಫೋಟೋ ತೆಗೆದುಕೊಂಡಿದ್ದರು. ಪ್ರವಾಸದ ಬಳಿಕ ಶೇರ್ ಇಟ್ ಮೂಲಕ ಫೋಟೋ ಶೇರ್ ಮಾಡಿಕೊಳ್ಳಲಾಗಿತ್ತು. ಇದೇ ವೇಳೆ ದಂಪತಿಯ ಖಾಸಗಿ ಫೋಟೋ, ವಿಡಿಯೋಗಳು ಸಹ ಶೇರ್ ಆಗಿತ್ತು.
ಆರೋಪಿ ಸಂತೋಷ್ ಈ ಫೋಟೋಗಳನ್ನು ಇಟ್ಟುಕೊಂಡು ದಂಪತಿಗೆ ಬೆದರಿಕೆ ಹಾಕುತ್ತಿದ್ದನು. 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದನು.
ಆರೋಪಿ ಸಂತೋಷ್ ರಾಜಾ ರಾಣಿ ಚಲನಚಿತ್ರದ ನಿರ್ದೇಶನ ಮಾಡಲು ಪ್ರಯತ್ನಿಸುತ್ತಿದ್ದು, ಚಿತ್ರವನ್ನು ನಿರ್ಮಾಣ ಮಾಡಲು ದಂಪತಿ ಹತ್ತಿರ ಹಣ ಕೇಳಿದ್ದರು. ಆದರೆ ದಂಪತಿ ಹಣ ಕೊಡಲು ನಿರಾಕರಿಸಿದ್ದರು. ಆಗ ಅವರ ಮೊಬೈಲಿನಿಂದ ಖಾಸಗಿ ದೃಶ್ಯ ಕಳವು ಮಾಡಿದ್ದನು. ಬಳಿಕ ಆರೋಪಿ ಹಣ ನೀಡುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದನು.
ಸದ್ಯ ಸೈಬರ್ ಪೋಲೀಸರಿಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.