– ಮಾಧ್ಯಮದವರು ಪ್ರಶ್ನಿಸಿದಾಗ ಊರಿಗೆ ಕಳುಹಿಸಿದ್ರು
ಕೊಪ್ಪಳ: ಮಗಳು ಮೃತಪಟ್ಟ ವಿಷಯವನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಪೋ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಜುನಾಥ್ ಅವರ ಮಗಳು ಸಾವನ್ನಪ್ಪಿದ್ದಾರೆ ಎಂಬ ವಿಷಯ ತಿಳಿಸಲು ಡಿಪೋಗೆ ಕರೆ ಮಾಡಿದ್ದೇವೆ ಎಂದು ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ. ಆದರೆ ಯಾರಿಗೆ ಕರೆ ಮಾಡಿ ಹೇಳಿದ್ದಾರೆ ಎಂಬುದನ್ನು ಅವರು ಹೇಳುತ್ತಿಲ್ಲ. ನನಗೆ ಮಂಜುನಾಥ್ ಬಂದು ಹೇಳಿದಾಗಲೇ ವಿಷಯ ತಿಳಿಯಿತು. ನನಗೆ ಈ ಮೊದಲೇ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಂಜುನಾಥ್ ಕುಟುಂಬಸ್ಥರು ಯಾರಿಗೆ ಕರೆ ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ನನಗೆ ಈ ವಿಷಯ ತಿಳಿದಿದ್ದಾರೆ. ನಾನು ಮಂಜುನಾಥ್ ಎಲ್ಲೇ ಇದ್ದರೂ ಹುಡುಕಿ ವಿಷಯ ಮುಟ್ಟಿಸುತ್ತಿದ್ದೆ. ಅವರ ಮನೆಯವರು ನಮಗೆ ವಿಷಯ ತಿಳಿಸಿಲ್ಲ ಎಂದು ಡಿಪೋ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಮಾಡಿದ ಬೆನ್ನಲ್ಲೇ ಕೆಎಸ್‍ಆರ್ ಟಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ, ‘ಅಗತ್ಯ ಕ್ರಮಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ದೂರು ರವಾನಿಸಲಾಗಿದೆ’ ಎಂದು ಟ್ವೀಟ್ ಮಾಡಿದೆ. ಇನ್ನು ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಲು ತೆರಳಿದ್ದಾಗ ಅಧಿಕಾರಿಗಳು ಮಂಜುನಾಥ್ ಅವರಿಗೆ ರಜೆ ನೀಡದೇ ಕರ್ತವ್ಯಕ್ಕೆ ಹಾಕಿದ್ದರು. ಬಳಿಕ ಮಾಧ್ಯಮದವರು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಆಗ ಅವರು ಮಂಜುನಾಥ್ ಅವರನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ ಮಂಜುನಾಥ್ ಜೊತೆ ವ್ಯಕ್ತಿಯೊಬ್ಬರನ್ನು ಸಹ ಕಳುಹಿಸಿಕೊಟ್ಟಿದ್ದಾರೆ.
ನಡೆದಿದ್ದೇನು?
ಕೊಪ್ಪಳದ ಗಂಗಾವತಿ ಕೊಲ್ಲಾಪುರ ಬಸ್ಸಿನ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತಾಲೂಕಿನ ರಾಂಪೂರದ ಮಂಜುನಾಥ್ ಅವರ ಪುತ್ರಿ ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಳು. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್‍ಗೆ ತಿಳಿಸಲು ಕುಟುಂಬ್ಥರು ಗಂಗಾವತಿ ಬಸ್ ಡಿಪೋಗೆ ಫೋನ್ ಮಾಡಿ ಹೇಳಿದ್ದರು. ಆದರೆ ಅಲ್ಲಿನ ಅಧಿಕಾರಿಗಳು ಮಂಜುನಾಥ್‍ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದರು.
ಮಂಜುನಾಥ್ ಕೆಲಸಕ್ಕೆ ಹೋಗಿ ಗುರುವಾರ ರಾತ್ರಿ ಡಿಪೋಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಮಂಜುನಾಥ್ ಅವರು ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿದ್ದಾರೆ. ನನಗೆ ಶುಕ್ರವಾರ ರಜೆ ಕೊಡಿ ಊರಿಗೆ ಹೋಗುತ್ತೇನೆ ಎಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದರು.