– ಬೆಂಗಳೂರಲ್ಲಿ ಜೆಡಿಎಸ್ ಮೀಟಿಂಗ್
ನವದೆಹಲಿ/ಬೆಂಗಳೂರು: ಲೋಕ ಸಮರದ ಅಸಲಿ ರಿಸಲ್ಟ್ ಗೆ ಇನ್ನೊಂದೇ ದಿನ ಬಾಕಿ ಇದೆ. ಅದಕ್ಕೂ ಮುಂಚೆ ಚುನಾವಣೊತ್ತರ ಸಮೀಕ್ಷೆಗಳು ದೆಹಲಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
ಮತ್ತೊಮ್ಮೆ ಮೋದಿ ಸರ್ಕಾರ್ ಎಂದು ಎಕ್ಸಿಟ್ ಪೋಲ್ ಹೇಳುತ್ತಿದ್ದು ಇದು ಬಿಜೆಪಿ ವಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಆದರೂ ಈ ಬಾರಿ ಮೋದಿ ಏಕಾಂಗಿಯಾಗಿ ಸರ್ಕಾರ ರಚನೆ ಕಷ್ಟ ಸಾಧ್ಯ ಎನ್ನಲಾಗಿದೆ. ಹೀಗಾಗಿ ಎನ್‍ಡಿಎ ಒಕ್ಕೂಟದ ಮಹತ್ವ ಅರಿತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಂದು ಸಂಜೆ ಮಿತ್ರ ಪಕ್ಷಗಳ ನಾಯಕರನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ್ದಾರೆ.
ಈ ವೇಳೆ ಕೇಂದ್ರ ಸಚಿವರು ಉಪಸ್ಥಿತರಿರಲಿದ್ದು, ಫಲಿತಾಂಶದ ಬಳಿಕ ತ್ವರಿತಗತಿಯಲ್ಲಿ ಸರ್ಕಾರ ರಚನೆಗೆ ಕಾರ್ಯತಂತ್ರಗಳನ್ನು ಹೆಣೆಯಲಾಗುತ್ತದೆ ಎನ್ನಲಾಗಿದೆ.
ಇತ್ತ ವಿರೋಧ ಪಕ್ಷಗಳು ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ಯತ್ನಿಸುತ್ತಿವೆ. ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ, ಟಿಡಿಪಿ, ಡಿಎಂಕೆ ಸೇರಿದಂತೆ 21 ವಿಪಕ್ಷಗಳ ನಾಯಕರು ಇಂದು ಮಧ್ಯಾಹ್ನ ಮೂರು ಗಂಟೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಲಿದ್ದಾರೆ. ಪ್ರತಿ ಬಾರಿ ಸೋಲಿನ ಭೀತಿ ವೇಳೆ ಬರುವ ಸಹಜ ಪ್ರಶ್ನೆಯಂತೆ ಈಗಲೂ ಇವಿಎಂ ಯಂತ್ರದ ವಿಶ್ವಾರ್ಹತೆ ಬಗ್ಗೆ ಧ್ವನಿ ಎದ್ದಿದ್ದು, ಇದಕ್ಕಾಗಿ ಈ ಬಾರಿ ಪ್ರತಿ ಕ್ಷೇತ್ರದಲ್ಲಿ ಇವಿಎಂ ಜೊತೆಗೆ ಐದು ವಿವಿಪ್ಯಾಟ್ ಮತ ಎಣಿಕೆಗೆ ಆದ್ಯತೆ ನೀಡಬೇಕು ಎಂದು ವಿಪಕ್ಷಗಳು ಮನವಿ ಮಾಡಲಿದೆ ಎಂಬುದಾಗಿ ತಿಳೀದುಬಂದಿದೆ.
ಜೆಡಿಎಸ್ ಮೀಟಿಂಗ್:
ಎಕ್ಸಿಟ್ ಪೋಲ್ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಮೈತ್ರಿ ಸರ್ಕಾರಕ್ಕೆ ಏನಾದರೂ ಕಂಟಕ ಬರಬಹುದು ಅನ್ನೋ ರಾಜಕೀಯ ಚರ್ಚೆ ಹಿನ್ನೆಲೆಯಲ್ಲಿ ಜೆಡಿಎಸ್ ಇವತ್ತು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸಭೆ ಕರೆದಿದೆ.
ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ರಾಜ್ಯಾಧ್ಯಕ್ಷ ವಿಶ್ವನಾಥ್, ಎಂಎಲ್‍ಸಿ ಹೊರಟ್ಟಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿರೋ ಹೇಳಿಕೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ.