-ಆಪರೇಷನ್ ಕಮಲಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಸಾಥ್
ಬೆಂಗಳೂರು: ಕೇಂದ್ರ ಸರ್ಕಾರದ ಅಧಿಕಾರವನ್ನು ರಾಜ್ಯ ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹಣ ಸಂಗ್ರಹಿಸಿ, ಶಾಸಕರನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಲೇವಾದೇವಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ. ಇದು ಬಹಿರಂಗವಾಗಿಯೇ ನಡೆಯುತ್ತಿದ್ದರೂ ಐಟಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿ, ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
Advertisement
ಮೊದಲು ಬಿಜೆಪಿ ಶಾಸಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದರು. ಆದರೆ ಈಗ ವಿಪಕ್ಷ ನಾಯಕ ಬಿ.ಎಸ್.ಯಡ್ಡಿಯೂರಪ್ಪ ಅವರೇ ನೇರವಾಗಿ ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ, ವಾಟ್ಸಪ್ ಸಂದೇಶ ಕಳುಹಿಸಿ ಬಿಜೆಪಿ ಸೇರುವಂತೆ ಕೇಳಿಕೊಳ್ಳುತ್ತಿದ್ದಾರೆ. ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರಿಗೆ ಕರೆ ಮಾಡಿದ್ದಾರೆ. ಜೊತೆಗೆ ನಮ್ಮ ಶಾಸಕರಿಗೆ ಸುಳ್ಳು ಆಮಿಷಗಳನ್ನು ಒಡ್ಡಿ ಸರ್ಕಾವರನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಕಾಂಗ್ರೆಸ್ ಶಾಸಕರು ಚೆನ್ನೈಗೆ ಹೋಗುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ, ಇದು ಊಹಾಪೋಹ. ಎಲ್ಲ ಶಾಸಕರು ನಮ್ಮ ಸಂಪರ್ಕದಲ್ಲಿಯೇ ಇದ್ದಾರೆ. ಇದೇ ತಿಂಗಳು 25ರಂದು ಶಾಸಕಾಂಗ ಸಭೆಯನ್ನು ಕರೆದಿದ್ದೇವೆ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಆದರೂ ಅಪರೇಷನ್ ಕಮಲಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇರವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಬಿಜೆಪಿ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುತ್ತಿದೆ. ನಮ್ಮ ಶಾಸಕರನ್ನು ಗೋವಾ, ಮುಂಬೈಗೆ ಸೇರಿದಂತೆ ವಿವಿಧ ಕಡೆಗಳಿಗೆ ಬರುವಂತೆ ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸರ್ಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಒಡ್ಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸುವ ಪ್ರಯತ್ನದಿಂದ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
18 ಶಾಸಕರು ನಮ್ಮ ಕಡೆ ಬರುತ್ತಾರೆ ಅಂತ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಶಾಸಕ ಡಾ.ಸುಧಾಕರ್ ಹಾಗೂ ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಎಲ್ಲರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಇದೇ 28ರಂದು ಮೇಯರ್ ಚುನಾವಣೆ, ಅಕ್ಟೋಬರ್ 3ರಂದು ವಿಧಾನ ಪರಿಷತ್ ಚುನಾವಣೆ ಹಾಗೂ 25 ರಂದು ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಯಾವುದೇ ಅನುಮಾನ ಬೇಡ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv