ಬೆಂಗಳೂರು: ಚುನಾವಣೆ ಘೋಷಣೆ ಮಾಡಿ, ನೀತಿ ಸಂಹಿತೆ ಮಾತ್ರ ನವೆಂಬರ್ 11ರಿಂದ ಜಾರಿ ಮಾಡಿದ್ದಾರೆ. ಅಂದರೆ ಸರ್ಕಾರ ಅಲ್ಲಿಯವರೆಗೂ ಏನು ಬೇಕಾದರೂ ಮಾಡಬಹುದೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಯಾವಾಗಲೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಈಗ ನೀತಿ ಸಂಹಿತೆ ಜಾರಿಯಾಗುವ ದಿನಾಂಕದವರೆಗೂ ಆ ಕ್ಷೇತ್ರಗಳಲ್ಲಿ ಜನರಿಗೆ ಸರ್ಕಾರ ಆಮಿಷ ಒಡ್ಡುತ್ತದೆ. ಸರ್ಕಾರಿ ಯಂತ್ರ ದುರುಪಯೋಗವಾಗುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ, ಬಿಜೆಪಿಯ ಸದಸ್ಯತ್ವ ತೆಗೆದುಕೊಂಡ ರೀತಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಬಿಜೆಪಿಯವರು ಹೇಳಿದಂತೆ ನಡೆದುಕೊಳ್ಳುತ್ತಿದೆ. ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡಿದೆ. ಚುನಾವಣೆಯನ್ನೇ ಮುಕ್ತವಾಗಿ ನಡೆಸಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಆಯೋಗ ಯಾಕೆ ಬೇಕು. ಐಟಿ, ಇಡಿ, ಸುಪ್ರೀಂ ಕೋರ್ಟ್, ಎಲ್ಲರೂ ಸ್ವಾಯತ್ತ ಕಳೆದುಕೊಂಡರೆ ನಮ್ಮ ಗತಿಯೇನು? ವ್ಯವಸ್ಥೆ ಎಲ್ಲಿಗೆ ಹೋಗಿ ಮುಟ್ಟುತ್ತಿದೆ. ಹಿಟ್ಲರ್ ಆಡಳಿತ ದೇಶದಲ್ಲಿ ಮತ್ತೆ ಜಾರಿಯಾಗುತ್ತಿದೆ ಎಂದು ಅನಿಸುತ್ತಿದೆ. ಈ ಕುರಿತು ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಕೊಡುತ್ತೇವೆ. ನೀತಿ ಸಂಹಿತೆ ಕೂಡಲೇ ಜಾರಿ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಧೈರ್ಯ ಮಾಡುತ್ತಿಲ್ಲ. ವಿರೋಧ ವ್ಯಕ್ತಪಡಿಸಿದರೆ ಜೈಲಿಗೆ ಹಾಕಲಾಗುವುದು ಎಂದು ಭಯಪಡಿಸುತ್ತಿದ್ದಾರೆ. ಇದು ಒಂದು ರೀತಿಯ ಪೋಲೀಸ್ ರಾಜ್ಯ, ಗೂಂಡಾ ರಾಜ್ಯ, ಐಟಿ ರಾಜ್ಯ ಆಗುತ್ತಿದೆ. ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿಯನ್ನು ನಾನು ಖಂಡಿಸಿದ್ದೆ. ಒಮ್ಮೆ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು ಎನ್ನುತ್ತಾರೆ. ಮತ್ತೊಮ್ಮೆ ಚುನಾವಣೆ ಮುಂದೂಡಲು ಅಭ್ಯಂತರ ಇಲ್ಲ ಎನ್ನುತ್ತಾರೆ. ಚುನಾವಣೆ ಮುಂದೂಡಿಕೆಯಾದ ನಂತರ ಮತ್ತೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ರಮ್ಯಾ ಅವರನ್ನು ಎಐಸಿಸಿ ಸೋಷಿಯಲ್ ಮೀಡಿಯಾದಿಂದ ತೆಗೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಬಳಿಕ ಅವರೇ ಆಕ್ಟೀವ್ ಇರಲಿಲ್ಲ. ಹೀಗಾಗಿ ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಿರಬಹುದು ಎಂದು ಸ್ಪಷ್ಟಪಡಿಸಿದರು.
ಅನರ್ಹ ಶಾಸಕರು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಬಗ್ಗೆ ಕಿಡಿಕಾರುತ್ತಿರುವ ಕುರಿತು ಮಾತನಾಡಿ, ಈಗ ಯಾಕೆ ಅನರ್ಹರಿಗೆ ನಮ್ಮ ವಿಚಾರ? ಅವರು ಪಕ್ಷ ಬಿಟ್ಟಾಯಿತು, ಸರ್ಕಾರ ಬೀಳಿಸಿದ್ದೂ ಆಯಿತು, ಅವರನ್ನು ಪಕ್ಷದಿಂದ ಉಚ್ಚಾಟಿಸಿಯೂ ಆಯಿತು. ಅವರಿಗೆ ಈಗ್ಯಾಕೆ ನಮ್ಮ ಚಿಂತೆ, ಅವರು ಎಲ್ಲಿದ್ದಾರೋ ಅಲ್ಲೇ ಚೆನ್ನಾಗಿರಲಿ. ಅಲ್ಲೇ ಮಂತ್ರಿಗಳಾಗಿರಲಿ, ಆದರೆ ಯಾವುದೇ ಕಾರಣಕ್ಕೂ ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ. ಈ ರೀತಿ ಕ್ಷುಲ್ಲಕವಾಗಿ ಮಾತಾಡುವುದು ಸರಿಯಲ್ಲ ಎಂದು ಕಿಡಿಕಾರಿದದರು.