ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ (Kukke Subrahmanya Temple) ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ (Dinesh Gundu Rao) ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಹಿಂದೆ ನಕಲಿ ಚೆಕ್ ನೀಡಿ ಹಣ್ಣು ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚಿಸಿದ ಪ್ರಕರಣದಲ್ಲಿ ಮಾಜಿ ರೌಡಿ ಶೀಟರ್, ಹಾಲಿ ಕಾಂಗ್ರೆಸ್ ಮುಖಂಡ ಹರೀಶ್ ಇಂಜಾಡಿ ಅರೆಸ್ಟ್ ಆಗಿದ್ದರು. ಹರೀಶ್ ಇಂಜಾಡಿ ವಿರುದ್ಧ ಮರಳು ಮಾಫಿಯಾ, ಮರ ಕಳ್ಳ ಸಾಗಣೆಯಲ್ಲಿ ತೊಡಗಿರುವ ಆರೋಪವೂ ಇದೆ. ಇಂತಹ ವ್ಯಕ್ತಿಗೆ ದೇವಳದ ಆಡಳಿತ ಮಂಡಳಿಯಲ್ಲಿ ಜಾಗ ಕೊಡಲು ಸಚಿವರು ಮುಂದಾಗಿದ್ದಾರೆ ಎನ್ನಲಾಗಿದೆ.
ಆಡಳಿತ ಮಂಡಳಿ ಸದಸ್ಯರಾಗಲು, ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಆಗಬಾರದು ಅನ್ನೊ ನಿಯಮವಿದೆ. ಹರೀಶ್ ಅವರಿಗೆ ಸದಸ್ಯ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಇದೇ ವಿಚಾರವಾಗಿ ಧಾರ್ಮಿಕದತ್ತಿ ಇಲಾಖೆಸಚಿವ ರಾಮಲಿಂಗಾರೆಡ್ಡಿಯವರಿಗೆ ಗ್ರಾಮಸ್ಥರು ಪತ್ರ ಬರೆದಿದ್ದರು.
ಇದೀಗ ದೇವಾಲಯದ ಆಡಳಿತ ಮಂಡಳಿಯಲ್ಲಿ ಅವರಿಗೆ ಸ್ಥಾನ ಕೊಡಲು ಸಚಿವರು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕುಕ್ಕೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.