ಬೆಂಗಳೂರು/ದಕ್ಷಿಣ ಕನ್ನಡ: ಮಂಗಳೂರಿನಲ್ಲಿ (Mangaluru) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಬಿಜೆಪಿಯವರು ಬೆಂಕಿ ಹಚ್ಚೋದು ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ಬೆಂಗಳೂರಿನಲ್ಲಿ ಮಾತಾನಾಡಿದ ಅವರು, ಕೊಲೆ ಕೇಸ್ ಅತ್ಯಂತ ಆಘಾತಕಾರಿ ಘಟನೆ. ಮೊನ್ನೆ ಅಶ್ರಫ್ ಎಂದು ತೀರಿ ಹೋಗಿದ್ದರು. ಇವತ್ತು ಸುಹಾಸ್ ಶೆಟ್ಟಿ ಕೊಲೆ ಆಗಿರುವುದು ಎಲ್ಲರಿಗೂ ಅಘಾತವಾಗಿದೆ. ಇದು ದುರ್ಘಟನೆ. ನಮ್ಮ ಪೊಲೀಸರು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಕ್ತ ಅವಕಾಶ ಕೊಟ್ಟಿದ್ದೇವೆ. ಪೊಲೀಸರು ಜವಾಬ್ದಾರಿಯಿಂದ ಉತ್ತಮವಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.ಇದನ್ನೂ ಓದಿ: ಸುಹಾಸ್‌ಗೆ ಆತ್ಮರಕ್ಷಣೆಗೆ ಒಂದು ದೊಣ್ಣೆಯನ್ನೂ ಇಟ್ಟುಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ: ಹರೀಶ್ ಪೂಂಜಾ
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕೋಮಿನ ವಿಷ ಬೀಜ ಹೋಗಲಾಡಿಸಲು ಎಲ್ಲರೂ ಪ್ರಯತ್ನ ಮಾಡಬೇಕು. ಪ್ರಚೋದನಕಾರಿ ಮಾತು ಆಡುವ ಮೂಲಕ, ದ್ವೇಷವನ್ನು ಹೆಚ್ಚಿಸುವ ಮೂಲಕ ಇದಕ್ಕೆ ಕೊನೆಯಿಲ್ಲ. ನಮಗೆ ಶಾಂತಿ, ನೆಮ್ಮದಿ ಸ್ಥಾಪನೆಯಾಗಬೇಕು. ದಕ್ಷಿಣ ಕನ್ನಡದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಕೆಲಸ ಮಾಡಬೇಕು. ಕೊಲೆ ಮಾಡಿರುವ ತಪ್ಪಿತಸ್ಥರನ್ನ ಬಂಧಿಸುವುದು ಪ್ರಥಮ ಆದ್ಯತೆ. ಪೊಲೀಸರು ಅದನ್ನ ಮಾಡುತ್ತಾರೆ. ಪೊಲೀಸರಿಗೆ ಫುಲ್ ಪವರ್ ಕೊಡ್ತೀವಿ. ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ಎಲ್ಲಾ ಧರ್ಮದವರು, ಜಾತಿಯವರು ಒಂದೇ. ಕಾನೂನಿನ ಮುಂದೆ ಎಲ್ಲರೂ ಒಂದೇ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ನಾಳೆ ಮಂಗಳೂರಿಗೆ ಹೋಗ್ತಿದ್ದೀನಿ. ಗೃಹ ಸಚಿವರ ಜೊತೆ ಮಾತಾಡಿದ್ದು, ಅವರು ಎಲ್ಲಾ ನಿಯಂತ್ರಣ ಮಾಡುತ್ತಿದ್ದಾರೆ. ಸಿಎಂ ಜೊತೆ ಮಾತಾಡಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೀವಿ ಎಂದರು.
ಕಾಂಗ್ರೆಸ್ (Congress) ಸರ್ಕಾರ ಬಂದಾಗಲೇ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತದೆ ಎಂಬ ಬಿಜೆಪಿ (BJP) ಆರೋಪ ವಿಚಾರಕ್ಕೆ ಕಿಡಿಕಾರಿದ ಅವರು, ಕೊಲೆ ಆಗಿರುವುದು ನೋವಿನ ಸಂಗತಿ. ಮೊನ್ನೆ ಅಶ್ರಫ್ ಕೊಲೆ ಆದಾಗ ಯಾಕೆ ಬಿಜೆಪಿ ಅವರು ಮಾತಾಡಿಲ್ಲ. ಅಶ್ರಫ್ ಸತ್ತಾಗ ಇವರು ಬಾಯಿ ಬಿಚ್ಚಲಿಲ್ಲ. ಮನುಷ್ಯರು ಮನುಷ್ಯರೇ. ಇಂತಹ ಮಾತು ಆಡುವ ಮೂಲಕ ಬಿಜೆಪಿ ತಪ್ಪಿನ ಹೆಜ್ಜೆ ಇಡುತ್ತಿದೆ. ಯಾರೇ ತೀರಿ ಹೋದರು ನಾವು ಖಂಡಿಸಬೇಕು. ನಾವೆಲ್ಲರು ಸೇರಿ ಎದುರಿಸಬೇಕು. ಇಲ್ಲದೆ ಹೋದರೆ ಮುಂದೆ ಇದೆಲ್ಲ ಯಾವ ರೀತಿ ಹೋಗುತ್ತದೆ ಎಂದು ಊಹೆ ಮಾಡಲು ಆಗುವುದಿಲ್ಲ. ಯಾವುದೇ ಪಕ್ಷ ಆಗಿರಲಿ ನಾವು ಎಲ್ಲಿ ಇದ್ದೀವಿ, ಮುಂದೆ ಏನಾಗಬಹುದು, ಇಂತಹ ಘಟನೆ ಆದರೆ ಯಾರಿಗೆ ತೊಂದರೆ ಆಗುತ್ತದೆ, ಅಮಾಯಕರು ತೀರಿ ಹೋಗುತ್ತಾರೆ ಎಂದು ಯೋಚಿಸಬೇಕು. ಬಿಜೆಪಿ ಅವರು ಇಂತಹ ಮಾತು ಆಡುವುದನ್ನು ಬಿಡಬೇಕು. ನಾವು ಕಾನೂನಿನ ಮುಂದೆ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳಲ್ಲ. ಬೆಂಕಿ ಹಚ್ಚುವ ಕೆಲಸ ಯಾರು ಮಾಡಬೇಡಿ. ಬೆಂಕಿ ಆರಿಸುವ ಕೆಲಸ ಮಾಡಿ. ಜಾಸ್ತಿ ಮಾಡುವ ಕೆಲಸ ಮಾಡಬೇಡಿ. ಜವಾಬ್ದಾರಿಯುತವಾಗಿ ಬಿಜೆಪಿ ಅವರು ಮಾತಾಡಬೇಕು ಎಂದು ಕಿಡಿಕಾರಿದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣ್ತಿದೆ: ಬಿವೈವಿ ಕಿಡಿ