– ಯತ್ನಾಳ್ ಒಂದು ರೀತಿ ಜೋಕರ್
ಕಲಬುರಗಿ: ಬಿಜೆಪಿ ಮುಖಂಡ ಉಮೇಶ್ ಜಾಧವ್ ಓರ್ವ ಗೋಮುಖ ವ್ಯಾಘ್ರ. ಅವನಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಚಿಂಚೋಳಿಯ ರಟಕಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರನ್ನು ಹೀಗೆ ವರ್ಣನೆ ಮಾಡಬೇಕು. ಪಕ್ಷ ಎಲ್ಲವನ್ನೂ ಅವರಿಗೆ ಕೊಟ್ಟಿದೆ. ಆದರೆ ಅನಾವಶ್ಯಕವಾಗಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಆರೋಪ ಮಾಡಿ, ಹಣದಾಸೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದರು ಎಂದು ಕಿಡಿಕಾರಿದರು.
Advertisement
Advertisement
ಬಳಿಕ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಏಕೈಕ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ಪಕ್ಷದ ಸ್ವಾರ್ಥವೇ ಮುಖ್ಯವಾಗಿದೆ. ಡೋಂಗಿತನ ಬಿಟ್ಟು ನಿಜವಾದ ನಾಯಕರಾಗಿ ಕೆಲಸ ಮಾಡಿ ಯಡಿಯೂರಪ್ಪನವರೇ ಎಂದು ಹೇಳಿದರು.
Advertisement
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಮನಸಿನಲ್ಲಿ ಒಳ್ಳೆಯ ವಿಚಾರ ಇವೆಯೋ, ಇಲ್ಲವೋ ಗೊತ್ತಿಲ್ಲ. ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಅವರು ಮಹಿಳೆಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದರೂ ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಕೆ.ಎಸ್.ಈಶ್ವರಪ್ಪ ಅವರು ರಾಜಕಾರಣಿ ಆಗಲು ಯೋಗ್ಯರಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಈಶ್ವರಪ್ಪನವರ ಬಾಯಿ ಮುಚ್ಚಿಸಬೇಕು. ಆಗದಿದ್ದರೆ ಭಾರತ್ ಮಾತಾಕಿ ಜೈ ಎನ್ನುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
Advertisement
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಭ್ರಮೆಯಲ್ಲಿ ಇದ್ದಾರೆ. ಮುಖ್ಯಮಂತ್ರಿ ಸ್ಥಾನ ಈಗ ಖಾಲಿಯಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತದೆ ಎನ್ನುವುದು ಸುಳ್ಳು ಆರೋಪ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರಾಧ್ಯನತೆ ನೀಡಲಾಗುತ್ತಿದೆ. ಯತ್ನಾಳ್ ಅವರು ಒಂದು ರೀತಿಯ ಜೋಕರ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.