ಬೆಂಗಳೂರು: ಆಪರೇಷನ್ ಕಮಲದ ಭೀತಿಗೆ ಬೆಚ್ಚಿಬಿದ್ದಿರುವ ಕೆಪಿಸಿಸಿ ಇಂದು ಬಳ್ಳಾರಿ ಭಾಗದ ಕಾಂಗ್ರೆಸ್ ಶಾಸಕರಿಗೆ ಕೆಪಿಸಿಸಿ ಕಚೇರಿಗೆ ಬರುವಂತೆ ಬುಲಾವ್ ನೀಡಿತ್ತು. ಅದರಂತೆ ಮಧ್ಯಾಹ್ನ ಹೊಸಪೇಟೆ ಶಾಸಕ ಆನಂದ್ ಸಿಂಗ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಬಂದಿದ್ದರು.
ಬಳಿಕ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯ ನಮ್ಮ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರೇ ಅನೈತಿಕ ರಾಜಕಾರಣ ಶುರುಮಾಡಿದ್ದಾರೆ, ನಮ್ಮ ಅನೇಕ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಅಂತಾ ಆರೋಪಿಸಿದರು.
ನಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡುವುದು ಹಾಗೂ ಮಾನಸಿಕ ಕಿರುಕುಳ ಕೊಡುವುದನ್ನು ನಿಲ್ಲಿಸಿ. ಇಲ್ಲದೇ ಹೋದರೆ ನಿಮ್ಮ ವಿಕೆಟ್‍ಗಳು ಪತನವಾಗತ್ತವೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು. ಇದನ್ನು ಓದಿ: ಬಳ್ಳಾರಿಯ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಂಪ್ ಆಗ್ತಾರಾ..?
ನಮ್ಮ ಪಕ್ಷಕ್ಕೆ ಬಿಜೆಪಿ ಶಾಸಕರು ಬರಲು ಸಿದ್ಧರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ಸಿಗೆ ಇಬ್ಬರು ಹಾಗೂ ಜೆಡಿಎಸ್‍ಗೆ ಐವರು ಬಿಜೆಪಿ ಶಾಸಕರು ಬರಲು ತಯಾರಾಗಿದ್ದಾರೆ. ಬಿಜೆಪಿಯ ಆಂತರಿಕ ಕಚ್ಚಾಟದಿಂದ ಅವರ ಶಾಸಕರು ಬೇಸತ್ತಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆದರೆ ನಾವು ಸಹಾ ತಿರುಗೇಟು ಕೊಡಬೇಕಾಗುತ್ತದೆ ಅಂತ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಬಿಜೆಪಿಯವರು ಪದೇ ಪದೇ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಯಾಕೆ ಎನ್ನುವುದು ನನಗೆ ಗೊತ್ತಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಸಮಸ್ಯೆಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಸಚಿವರ ಜೊತೆ ನಾವೆಲ್ಲರೂ ಒಟ್ಟಾಗಿ ಇರುತ್ತೇವೆ. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಪ್ರಭಾವಿ ನಾಯಕರು. ಅವರ ಜೊತೆಗೂ ನಾವೆಲ್ಲ ಆತ್ಮೀಯತೆ ಹೊಂದಿದ್ದೇವೆ. ಅವರು ನಮ್ಮ ಜಿಲ್ಲೆಗೆ ಆಗಮಿಸಿದಾಗ ಒಟ್ಟಾಗಿ ಸ್ವಾಗತಿಸಿದ್ದೇವೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv