– ಚುನಾವಣೆಗಾಗಿ ಬಿಜೆಪಿಯಿಂದ ವಕ್ಫ್ ವಿವಾದ
ಬೆಂಗಳೂರು: ಮುಸ್ಲಿಮರನ್ನ ರಾಕ್ಷಸರ ತರ ನೋಡುವ ವಾತಾವರಣ ನಿರ್ಮಾಣ ಮಾಡಲು ಬಿಜೆಪಿ, ಕೇಂದ್ರ ಸರ್ಕಾರ ಯತ್ನಿಸುತ್ತಿವೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬಿಜೆಪಿ (BJP) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ವಿವಾದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿಯವರು ದುರುದ್ದೇಶದಿಂದ ಚುನಾವಣೆವಾಗಿ ವಕ್ಫ್ ವಿವಾದ (Waqf Property Disputes) ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಆ ವಿಷಯ ಕೈ ಬಿಡುತ್ತಾರೆ. ವಕ್ಫ್ ವಿಚಾರದಲ್ಲಿ ಅನೇಕ ಚರ್ಚೆಗಳು ಆಗಿವೆ. ಈ ಹಿಂದೆ ಅನೇಕ ದಾನಗಳು ಆಗಿವೆ. ಅದರಲ್ಲಿ ಏನಾದರೂ ದೋಷ ಇದ್ದರೆ ಸರಿಪಡಿಸಿಕೊಳ್ಳುವುದಕ್ಕೆ ನಮ್ಮ ಸರ್ಕಾರ ಇದೆ. ಬಿಜೆಪಿಯವರು ಸುಮ್ಮನೆ ಅದನ್ನು ಕೋಮುವಾದದ ದೃಷ್ಟಿಯಿಂದ ನೋಡ್ತಿದ್ದಾರೆ. ಬಿಜೆಪಿಯವರಿಗೆ ದ್ವೇಷವನ್ನು ಹೆಚ್ಚು ಮಾಡಬೇಕು, ಮುಸ್ಲಿಮರನ್ನು ಟಾರ್ಗೆಟ್ ಮಾಡಬೇಕು. ಅದು ಬಿಟ್ಟು ಇನ್ನೇನೂ ಇಲ್ಲ ಎಂದು ಕಿಡಿಕಾರಿದ್ದಾರೆ.
ಇವರದ್ದೇ ಸರ್ಕಾರದ ಅವಧಿಯಲ್ಲಿ ಅನೇಕ ನೋಟಿಸ್‌ಗಳನ್ನು ಕೊಡಲಾಗಿದೆ. ಅದನ್ನೆಲ್ಲಾ ಕಾನೂನು ಪ್ರಕಾರ ತೀರ್ಮಾನ ಮಾಡಬೇಕೇ ಹೊರತು ಕೋಮುವಾದದ ಲೇಪವನ್ನು ಹಾಕೋದು ಸರಿಯಲ್ಲ. ಗೊಂದಲ ಸೃಷ್ಟಿ ಮಾಡಿ ರಾಜಕೀಯ ಲಾಭಕ್ಕಾಗಿ ಮಾಡೋದು ಸರಿಯಲ್ಲ. ಚುನಾವಣೆ ಮುಗಿದ ಮೇಲೆ ಯಾರೂ ಕಾಣಲ್ಲ. ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಇದು ಸರಿಯಲ್ಲ. ಅನೇಕ ವಿಚಾರಗಳನ್ನು ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಸರ್ಕಾರ ಯಾರ ಭೂಮಿಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಯಾರನ್ನೂ ಒಕ್ಕಲೆಬ್ಬಿಸಲ್ಲ, ಯಾರ ಭೂಮಿಯನ್ನು ಕಬಳಿಸಲ್ಲ. ಬಿಜೆಪಿಯವರಿಗೆ ನಿಜಾಂಶದ ಬಗ್ಗೆ ಚರ್ಚೆಯಾಗಬೇಕಿಲ್ಲ. ಸುಮ್ಮನೇ ಸುದ್ದಿಯಾಗಬೇಕಷ್ಟೆ. ಅದಕ್ಕೇ ಈ ರೀತಿ ಮುಸ್ಲಿಮರು ಆಸ್ತಿ ಕಬಳಿಸ್ತಿದ್ದಾರೆ. ಅವರು ಒಳ್ಳೆಯವರಲ್ಲ ದೇಶದ್ರೋಹಿಗಳು, ದೇಶ ಪ್ರೇಮ ಇಲ್ಲ. ದೇಶದಲ್ಲಿ ಏನು ತಪ್ಪಾದರೂ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ವಿಚಾರದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ವಕ್ಫ್,ಅರಣ್ಯಭೂಮಿ, ಗೋಮಾಳ, ಸರ್ಕಾರಿ ಭೂಮಿ ಇರಬಹುದು ಏನಾದರೂ ಕಂದಾಯ ದಾಖಲೆ ಬಂದಾಗ ಅದನ್ನು ನೋಡಿ ತೀರ್ಮಾನ ತೆಗೆದುಕೊಳ್ತಾರೆ. ಕಾನೂನು ಇದೆ, ಕಾನೂನು ಬಿಟ್ಟು ಬೇರೆ ಏನು ಮಾಡೋಕೆ ಆಗಲ್ಲ ಎಂದಿದ್ದಾರೆ.
ಉಪಚುನಾವಣೆ ಮೇಲೆ ಮೇಲೆ ವಕ್ಫ್ ವಿವಾದ ಪ್ರಭಾವ ಬೀರುತ್ತಾ ಎಂಬ ಪ್ರಶ್ನೆಗೆ, ಚುನಾವಣೆಗೋಸ್ಕರವೇ ಬಿಜೆಪಿ ಅದನ್ನು ಮಾಡ್ತಿರೋದು. ಒಳ್ಳೆಯದು ಮಾಡೋದಕ್ಕಿಂತ ಕೆಟ್ಟದು ಮಾಡೋ ಕಡೆ ಗಮನ ಹರಿಸ್ತಾರೆ. ಆದರೆ ಇದೆಲ್ಲವನ್ನು ಜನ ನೋಡ್ತಿದ್ದಾರೆ. ಪರೇಶ್ ಮೆಸ್ತಾ ಪ್ರಕರಣ ಆಯ್ತು. ಆಗ ಕರಾವಳಿ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಗಲಾಟೆ ಎಬ್ಬಿಸಿದ್ದರು, ಆಗೇನಾಯ್ತು. ಇವರದೇ CBI ಇತ್ತು. ಅದರ ಬಗ್ಗೆ ಮಾತಾಡೋಕೆ ಹೋಗಲಿಲ್ಲ. ಇದನ್ನ ಜನ ತಿಳಿದುಕೊಳ್ಳಲಿ ಇನ್ನೇನು ಬೇಡ. ಇದು ಚುನಾವಣಾ ಗಿಮಿಕ್ ಅಷ್ಟೇ ಎಂದು ಹೇಳಿದ್ದಾರೆ.