ಬೆಂಗಳೂರು: ಜಿಂದಾಲ್ ಡೀಲ್ ವಿಚಾರದಲ್ಲಿ ಮೊದಮೊದಲು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆರೋಪವನ್ನು ಕಡೆಗಣಿಸಿ ಸುಮ್ಮನಾಗಿದ್ದ ಕೆಪಿಸಿಸಿ, ಈಗ ವಿವಾದ ತೀವ್ರ ಸ್ವರೂಪ ಪಡೆದ ಬಳಿಕ ಡ್ಯಾಮೇಜ್ ಕಂಟ್ರೋಲ್‍ಗೆ ಇಳಿದಿದೆ.
ಟ್ವಿಟ್ಟರ್‍ನಲ್ಲಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ಸಚಿವ ಕೆ.ಜೆ. ಜಾರ್ಜ್ ಹಾಗೂ ಮಾಜಿ ಸಚಿವ ಎಚ್‍ಕೆ ಪಾಟೀಲ್ ಅವರನ್ನು ಕೆಪಿಸಿಸಿ ಕಚೇರಿಗೆ ಕರೆಸಿದ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಎಚ್.ಕೆ.ಪಾಟೀಲ್ Vs ಕೆ.ಜೆ.ಜಾರ್ಜ್: ಕೈ ನಾಯಕರ ನಡುವೆ ಜಿಂದಾಲ್ ಜಟಾಪಟಿ
ದಿನೇಶ್ ಗುಂಡೂರಾವ್ ಅವರು ಇಬ್ಬರು ನಾಯಕರನ್ನು ಕೂರಿಸಿಕೊಂಡು ಸುಮಾರು 2 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ವಿವಾದ ಬಗೆಹರಿಯಲಿಲ್ಲ. ಅಂತಿಮವಾಗಿ ಭಾಣುವಾರ ಸಿಎಂ ಕುಮಾರಸ್ವಾಮಿ ಅವರ ಅಂಗಳಕ್ಕೆ ವಿವಾದ ಕೊಂಡೊಯ್ಯಲು ತೀರ್ಮಾನಿಸಲಾಯಿತು. ಹೀಗಾಗಿ ಎಚ್.ಕೆ ಪಾಟೀಲ್ ಮತ್ತು ಕೆ.ಜೆ.ಜಾರ್ಜ್ ಅವರು ನಾಳೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಏನಾಯ್ತು?:
ಸಾರ್ ನೀವು ತುಂಬಾ ಹಿರಿಯರಿದ್ದೀರಿ. ಪದೇ ಪದೇ ಮಾಧ್ಯಮಗಳ ಮುಂದೆ ಹೋಗುತ್ತೀರಿ. ಅದಕ್ಕೆ ಕೆ.ಜೆ.ಜಾರ್ಜ್ ಅವರನ್ನ ಕರೆಸಿದ್ದೇನೆ. ನಿಮ್ಮ ಆರೋಪಕ್ಕೆ ಅವರಿಂದಲೇ ಸ್ಪಷ್ಟೀಕರಣ ಮಾಡಿಕೊಳ್ಳಿ. ಪದೇ ಪದೇ ಬಹಿರಂಗ ಹೇಳಿಕೆ ನೀಡಿದರೆ ಸಮಸ್ಯೆಯಾಗುತ್ತದೆ. ಪಕ್ಷ, ಸರ್ಕಾರಕ್ಕೂ ಮುಜುಗರವಾಗುತ್ತದೆ ಎಂದು ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್ ಅವರಿಗೆ ಹೇಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಕೆಜೆ ಜಾರ್ಜ್ ಅವರು, ಅಡ್ವಕೇಟ್ ಜನರಲ್ ಅವರ ಸಲಹೆಯ ಮೇರೆಗೆ ಜಿಂದಾಲ್‍ಗೆ ಭೂಮಿ ನೀಡಿದ್ದೇವೆ. ಹಿಂದೆಯೇ ಲೀಸ್ ಕಂ ಸೇಲ್ ಡೀಡ್ ಮಾಡಲಾಗಿತ್ತು. ಅದರಂತೆಯೇ ಈಗ ನಡೆದುಕೊಂಡಿದ್ದೇವೆ. ಎಲ್ಲಿಯೂ ನಾವು ನಿಯಮ ಉಲ್ಲಂಘನೆ ಮಾಡಿಲ್ಲ. ಹಿರಿಯರಾದ ನೀವೇ ಹೀಗೆ ಮಾಡಿದರೆ ಹೇಗೆ? ಬಿಜೆಪಿಯವರಿಗೆ ನಿಮ್ಮ ಹೇಳಿಕೆಯೇ ದೊಡ್ಡದಾಗಿದೆ ಎಂದು ಎಚ್.ಕೆ.ಪಾಟೀಲ್ ಅವರಿಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಚ್‍ಕೆ ಪಾಟೀಲ್ ಅವರು, ನೀವು ಲೀಸ್ ಮುಂದುವರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕ್ರಯಕ್ಕೆ ಕೊಟ್ಟಿರುವುದು ಸರಿಯಲ್ಲ. ಸಾರ್ವಜನಿಕ ಆಸ್ತಿಯನ್ನು ಎಕರೆಗೆ 1.22 ಲಕ್ಷದಂತೆ ನೀಡಿದ್ದೀರಿ. ಈಗ ಅದರ ಬೆಲೆ ಎಷ್ಟಿದೆ ಎನ್ನುವುದು ಗೊತ್ತಾ? ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತದೆ. ಮೊದಲು ಸಂಪುಟದ ನಿರ್ಧಾರವನ್ನು ಪರಿಶೀಲಿಸಿ. ಇದು ಸರಿಯಲ್ಲ. ಭೂಮಿ ವಿಚಾರದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಾನು ನನ್ನ ನಿಲುವು ಬದಲಿಸಲ್ಲ ಎಂದು ಪಟ್ಟು ಹಿಡಿದ್ದಾರೆ.
ರಾಜ್ಯದ ಹಿತವನ್ನ ಗಮನಲ್ಲಿಟ್ಟುಕೊಂಡು ಮೈತ್ರಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಬೇಕಿದ್ದರೆ ಮುಖ್ಯಮಂತ್ರಿಗಳನ್ನು ಒಮ್ಮೆ ಭೇಟಿ ಮಾಡಿ ಎಂದು ಕೆಜೆ ಜಾರ್ಜ್, ಎಚ್.ಕೆ.ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಎಚ್‍ಕೆ ಪಾಟೀಲ್ ಅವರು, ಕುಮಾರಸ್ವಾಮಿ ಜೊತೆಗೂ ಈ ವಿಚಾರ ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಆಯ್ತು ಸರ್, ನೀವು ಹೇಳಿದ ಹಾಗೇ ಅಗಲಿ. ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ. ಸಮಸ್ಯೆ ಬಗೆಹರಿಸಿಕೊಳ್ಳಿ. ಇದರಿಂದ ಸರ್ಕಾರಕ್ಕೂ, ಪಕ್ಷಕ್ಕೂ ಮುಜುಗರ ಆಗುವುದು ತಪ್ಪುತ್ತದೆ ಎಂದು ದಿನೇಶ್ ಗುಂಡೂರಾವ್ ಕೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.