‘ಡಿ’ ಕಂಪನಿಯ ‘ದಿನಕರೋತ್ಸವ’ದಲ್ಲಿ ಟಕ್ಕರ್!

Public TV
2 Min Read
Dinakarotsava Takkar 1

ಬೆಂಗಳೂರು: ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳೆಲ್ಲಾ ಸೇರಿ ನಡೆಸುತ್ತಿರುವ ನೋಂದಾಯಿತ ಸಂಘ ‘ಡಿ ಕಂಪನಿ’. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯ ‘ಡಿ ಕಂಪನಿ’ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ‘ಡಿ ಕಂಪನಿ’ ಹಲವಾರು ಸಾಮಾಜಿಕ ಜವಾಬ್ದಾರಿಯ ಕೆಲಸಗಳನ್ನು ನಡೆಸುತ್ತಲೇ ಬಂದಿದೆ.

Dinakarotsava Takkar 2

ದಿನಕರ್ ತೂಗುದೀಪ ಅವರು ತಮ್ಮ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸಿಕೊಳ್ಳುವುದಿಲ್ಲ. ‘ಕೇಕು ಕತ್ತರಿಸಿ, ಹೂವು, ಹಾರಗಳಿಗೆ ಖರ್ಚು ಮಾಡುವ ಹಣವನ್ನು ಸಮಾಜದ ಒಳಿತಿಗೆ ವ್ಯಯ ಮಾಡಬೇಕು’ ಎನ್ನುವ ದಿನಕರ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿರುವ ‘ಡಿ ಕಂಪನಿ’ ಕಳೆದ ಮೂರು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನು ನೀಡುವುದು, ಅನಾಥಾಶ್ರಮಕ್ಕೆ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ ವಿತರಿಸುವ ಕಾರ್ಯ ಮಾಡಿತ್ತು. ಈ ವರ್ಷ ಹಾಸನ ಜಿಲ್ಲೆಯ ಮಳಲಿ ಬಳಿಯ ರಾಮೇನಹಳ್ಳಿ ಎಂಬ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು 2 ವರ್ಷಗಳ ಕಾಲಕ್ಕೆ ದತ್ತು ಪಡೆದುಕೊಂಡಿದೆ. ಈ ಮೂಲಕ ಮಕ್ಕಳಿಗೆ ಬಟ್ಟೆ, ಪುಸ್ತಕ, ಶಾಲೆಗೆ ಬಣ್ಣ, ಪೀಠೋಪಕರಣಗಳು ಸೇರಿದಂತೆ ಶಾಲೆಗೆ ಬೇಕಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಇದರ ಜೊತೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಿದರೂ ಕನಿಷ್ಠ ಹತ್ತು ಗಿಡಗಳನ್ನು ನೆಡುವುದು ‘ಡಿ ಕಂಪನಿ’ ವಾಡಿಕೆ. ರಾಮೇನಹಳ್ಳಿ ಶಾಲಾ ಆವರಣದಲ್ಲೂ ಗಿಡಗಳನ್ನು ನೆಡಲಾಯಿತು.

dinakar thoogudeepa

ವಿಶೇಷವೆಂದರೆ ಈ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ‘ದಿನಕರೋತ್ಸವ’ವನ್ನು ಆಚರಿಸಿದ ಸಂದರ್ಭದಲ್ಲಿ ‘ಟಕ್ಕರ್’ ಚಿತ್ರತಂಡದ ನಾಯಕ ನಟ ಮನೋಜ್ ಕುಮಾರ್, ನಾಯಕಿ ರಂಜನಿ ರಾಘವನ್, ನಿರ್ಮಾಪಕ ನಾಗೇಶ್ ಕೋಗಿಲು ಉಪಸ್ಥಿತರಿದ್ದರು.

ನಟ ಮನೋಜ್ ಮಾತನಾಡಿ ‘ನನ್ನ ಮಾವಂದಿರಾದ ದರ್ಶನ್ ಮತ್ತು ದಿನಕರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಕಂಪನಿ, ಈ ರೀತಿ ಜನಸ್ನೇಹಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಆದರ್ಶವಾಗಿದೆ. ಇವತ್ತು ಕನ್ನಡವೇ ನಮ್ಮ ಅನ್ನ, ಕನ್ನಡ ನಮ್ಮ ಉಸಿರಾಗಿದೆ. ಕನ್ನಡಿಗರು ನಮ್ಮ ದರ್ಶನ್ ಮತ್ತು ದಿನಕರ್ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಹೀಗಿರುವಾಗ ಕನ್ನಡ ಶಾಲೆಯನ್ನು ದತ್ತು ಸ್ವೀಕರಿಸಿರುವ ‘ಡಿ’ ಕಂಪನಿಯ ಕನ್ನಡ ಪ್ರೇಮವನ್ನು ಮೆಚ್ಚಬೇಕು ಎಂದರು.

Takkar 4

‘ನನ್ನ ತಾಯಿ ಕೂಡಾ ಹಾಸನದಲ್ಲಿ ಜನಿಸಿದವರು. ಇದೇ ನೆಲದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನಗೆ ಹೆಮ್ಮೆ ತಂದಿದೆ’ ಎಂದರು ರಂಜನಿ ರಾಘವನ್. ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡುತ್ತಾ, ನಾನು ಕನ್ನಡ ಶಾಲೆಯಲ್ಲಿ ಓದಿದವನು. ಇವತ್ತು ಖಾಸಗಿ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳಿಗೆ ಸಂಚಕಾರ ಬಂದಿದೆ. ಇದರ ಮಧ್ಯೆಯೂ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯವಿದೆ. ಈ ಶಾಲೆಯನ್ನು ದತ್ತು ಸ್ವೀಕರಿಸಿರುವ ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳ ಕಾರ್ಯ ಶ್ಲಾಘನೀಯ ಎಂದು ನುಡಿದರು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ದಿನಕರ್ ತೂಗುದೀಪ, ನನ್ನ ನಲವತ್ತೆರಡನೇ ಹುಟ್ಟುಹಬ್ಬ ಇಷ್ಟೊಂದು ಅರ್ಥಪೂರ್ಣವಾಗಿ ನೆರವೇರಿದೆ. ಇದಕ್ಕಿಂತಾ ಖುಷಿ ಬೇರೇನಿದೆ. ನಮ್ಮ ಅಭಿಮಾನಿ ಸಂಘ ಮುಂದೆಯೂ ಹೀಗೇ ಉತ್ತಮ ಕೆಲಸಗಳನ್ನು ಮಾಡಿ ಮಾದರಿಯಾಗಲಿ. ಟಕ್ಕರ್ ಚಿತ್ರತಂಡಕ್ಕೂ ಒಳಿತಾಗಲಿ ಎಂದಿದ್ದಾರೆ.

Takkar 2

Share This Article
Leave a Comment

Leave a Reply

Your email address will not be published. Required fields are marked *