Cinema
ಬಹುಭಾಷಾ ನಟಿಯ ಕಿಡ್ನಾಪ್ ಕೇಸ್: ನಟ ದಿಲೀಪ್ ಅರೆಸ್ಟ್

ತಿರುವನಂತಪುರಂ: ಬಹುಭಾಷಾ ನಟಿಯ ಕಿಡ್ನಾಪ್ ಕೇಸಿಗೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆಯಿಂದ ಪೊಲೀಸರು ದಿಲೀಪ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. 13 ಗಂಟೆಗಳ ನಡೆದ ಸತತ ವಿಚಾರಣೆ ಬಳಿಕ ಪೊಲೀಸರು ದಿಲೀಪ್ ಅವರನ್ನು ಬಂಧಿಸಿದ್ದಾರೆ ಎಂದು ಮಲೆಯಾಳಂ ಮಾಧ್ಯಮಗಳು ವರದಿ ಮಾಡಿವೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿ ಮತ್ತು ದಿಲೀಪ್ ಅವರ ನಡುವೆ ಸ್ನೇಹವಿದ್ದು, ದಿಲೀಪ್ ಸೂಚನೆ ಮೇರೆಗೆ ಈ ಅಪಹರಣ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಕೆಲ ದಿನಗಳ ಹಿಂದೆ ದಿಲೀಪ್ ಪತ್ನಿ ಆಗಿರುವ ಕಾವ್ಯಾ ಮನೆಗೆ ಪೊಲೀಸರು ದಾಳಿ ನಡೆಸಿದ್ದರು.
ಏನಿದು ಪ್ರಕರಣ?
ಕೇರಳದ ಕೊಚ್ಚಿಯಿಂದ ಫೆಬ್ರವರಿ 17 ರಂದು ರಾತ್ರಿ ವೇಳೆಗೆ ಶೂಟಿಂಗ್ ಮುಗಿಸಿ ತ್ರಿಶೂರ್‍ಗೆ ತೆರಳುತ್ತಿದ್ದ ಮಲೆಯಾಳಂ ನಟಿಯನ್ನು ಐದು ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿತ್ತು. ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಕಾರಿನಲ್ಲಿಯೇ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆಯ ಬಳಿಕ ನಟಿ ನಿರ್ಮಾಪಕರ ಮನೆಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
