ಬೆಂಗಳೂರು: ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಿನಿಮಾ ಯಾನದ ಕಥೆಯಿದು. ಸರಿಸುಮಾರು ಮೂರೂವರೆ ವರ್ಷಗಳ ಮುಂಚೆ ರಾಜವರ್ಧನ್ ಫ್ಲೈ ಅನ್ನೋ ಸಿನಿಮಾದ ಮೂಲಕ ನಾಯಕ ನಟನಾಗಿ ಕೆಲಸ ಶುರು ಮಾಡಿದವರು. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಅದಾಗಲೇ ಬಿಡುಗಡೆಗೆ ತಯಾರಾಗಿರುವ ಐರ ಸಿನಿಮಾದಲ್ಲೂ ರಾಜವರ್ಧನ್ ನಟಿಸಿದ್ದಾರೆ. ನೂರೊಂದು ನೆನಪು ಎನ್ನುವ ಸಿನಿಮಾ ಕಳೆದ ವರ್ಷವಷ್ಟೇ ಬಿಡುಗಡೆಯಾಗಿತ್ತು.
ಈಗ ಇದ್ದಕ್ಕಿದ್ದಂತೆ ರಾಜವರ್ಧನ್ ಬಗ್ಗೆ ಹೇಳಲೂ ಕಾರಣವಿದೆ. ನಾದಬ್ರಹ್ಮ ಹಂಸಲೇಖಾ ಮತ್ತೆ ಚಿತ್ರವೊಂದನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಇದೇ ತಿಂಗಳ 23ರಂದು ಹಂಸಲೇಖಾ ತಮ್ಮ ಹುಟ್ಟುಹಬ್ಬದ ದಿನ ಆ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ. ರಾಜಾ ಬಿಚ್ಚುಗತ್ತಿ ಭರಮ್ಮಣ್ಣ ನಾಯಕನ ಜೀವನವನ್ನು ಆಧರಿಸಿ ಹಿರಿಯ ಕಥೆಗಾರ ಬಿ.ಎಲ್.ವೇಣು ಬರೆದ ಕೃತಿಯನ್ನೇ ಸಿನಿಮಾ ರೂಪಕ್ಕೆ ಇಳಿಸಲಾಗುತ್ತಿದೆ. ಈ ಚಿತ್ರದ ಬಿಚ್ಚುಗತ್ತಿ ಭರಮಣ್ಣನಾಗಿ ರಾಜವರ್ಧನ್ ನಟಿಸುತ್ತಿದ್ದಾರೆ. ಇದಲ್ಲದೇ ಶರಣ್ ನಟನೆಯಲ್ಲಿ ಅಲೆಮಾರಿ ಸಂತು ನಿರ್ದೇಶಿಸಿರುವ ವಿಕ್ಟರಿ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡಾ ರಾಜವರ್ಧನ್ ನಟಿಸುತ್ತಿದ್ದಾರೆ. ಕನ್ನಡದ ಯಾರಾದರೂ ಸ್ಟಾರ್ ನಟರನ್ನು ಈ ಗೆಸ್ಟ್ ಅಪಿಯರೆನ್ಸ್‍ಗೆ ಕರೆಯಬೇಕು ಎಂದು ಯೋಚಿಸೋ ಹೊತ್ತಲ್ಲ ಸ್ವತಃ ಶರಣ್ ಅವರು ರಾಜವರ್ಧನ್ ಅವರನ್ನು ಹಾಕಿಕೊಂಡರೆ ಹೇಗೆ ಅನ್ನೋ ಪ್ಲಾನು ನೀಡಿದ್ದರಂತೆ. ಅದರನ್ವಯ ಈ ಪಾತ್ರಕ್ಕೆ ರಾಜವರ್ಧನ್ ವಿಕ್ಟರಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಡಿಂಗ್ರಿ ನಾಗರಾಜ್ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಹೆಸರು ಮಾಡಿದವರು. ಸಾಕಷ್ಟು ವರ್ಷ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿಯೂ ಬದುಕು ಕಷ್ಟವೆನಿಸಿದಾಗ ಕಿರುತೆರೆ ಮತ್ತು ರಂಗಭೂಮಿಗೆ ಮರಳಿ ಚೇತರಿಸಿಕೊಂಡವರು. ಜೀವನದಲ್ಲಿ ಸಾಕಷ್ಟು ರೀತಿಯ ನೋವು ನಲಿವುಗಳನ್ನು ಕಂಡಿರುವ ಡಿಂಗ್ರಿ ನಾಗರಾಜ್‍ರಂಥ ನಟನ ಪುತ್ರ ಇಷ್ಟು ದೊಡ್ಡ ಮಟ್ಟದ ಅವಕಾಶಗಳನ್ನು ಪಡೆಯುತ್ತಿರುವುದು ನಿಜಕ್ಕೂ ಕನ್ನಡಿಗರ ಪಾಲಿನ ಹೆಮ್ಮೆ ಎಂದು ಸಿನಿ ಪ್ರೇಮಿಗಳು ಹೇಳಿದ್ದಾರೆ.
ರಾಜವರ್ಧನ್‍ಗೆ ಕನ್ನಡ ಚಿತ್ರರಂಗದಲ್ಲಿ ರಾಜಯೋಗ ಒಲಿದುಬರಲಿ. ಆ ಮೂಲಕ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ನೆಮ್ಮದಿಯ ಬದಕು ಕಾಣುವಂತಾಗಲಿ.