ಬೆಂಗಳೂರು: ಈಗೇನಿದ್ರೂ ಡಿಜಿಟಲ್ ಜಮಾನ. ನಾವು ಮಾಡುವ ಪ್ರತಿ ಕೆಲಸನೂ ಡಿಜಿಟಲಿಕರಣಗೊಂಡಿರುತ್ತದೆ. ಈ ಡಿಜಿಟಲೀಕರಣ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಸಹ ಅಳವಡಿಸಿಕೊಂಡಿದ್ದಾರೆ.
ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸ್ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾತ್ರಿ ಹಾಗೂ ಹಗಲು ಬೀಟ್ ನಲ್ಲಿರುವ ಪೊಲೀಸರು, ತಾವು ಕೈಗೊಳ್ಳುವ ಬೀಟ್‍ನ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ‘ಇ-ಬೀಟ್’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಾಗಿ ಆಗ್ನೇಯ ಡಿಸಿಪಿ ವಿಭಾಗ Subhahu Beat ಎಂಬ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಇದಕ್ಕೆ ಗೃಹ ಇಲಾಖೆ ಮೆಚ್ಚುಗೆ ಸೂಚಿಸಿದ್ದು, ಪ್ರಾಯೋಗಿಕವಾಗಿ ಆರಂಭವಾಗಿರುವ ‘ಸುಬಾಹು’ವನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನ್ವಯಿಸಲು ಇಲಾಖೆ ಮುಂದಾಗಿದೆ.
ಅಂಡ್ರಾಯ್ಡ್ ಮೊಬೈಲ್‍ನಲ್ಲಿ ‘ಸುಬಾಹು’ ಡೌನ್‍ಲೋಡ್ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕು. ಬಳಿಕ ಬೀಟ್ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯುಆರ್ ಕೋಡ್‍ನ್ನು ತಮ್ಮ ಮೊಬೈಲ್‍ನಿಂದಲೇ ಸ್ಕ್ಯಾನ್ ಮಾಡಬೇಕು. ಆಗ ಸರ್ವರ್ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ. ಇದರಿಂದ ಪೊಲೀಸ್ ಬೀಟ್ ಮೇಲೆ ಇಲಾಖೆ ನಿಗಾ ಇಡಬಹುದಾಗಿದೆ.